ADVERTISEMENT

ಎಸ್‌ಸಿ ಸಮುದಾಯವನ್ನು ಟಿಎಂಸಿ ಅವಮಾನಿಸಿದೆ: ಪ್ರಧಾನಿ ಮೋದಿ

ಏಜೆನ್ಸೀಸ್
Published 10 ಏಪ್ರಿಲ್ 2021, 11:09 IST
Last Updated 10 ಏಪ್ರಿಲ್ 2021, 11:09 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಸಿಲಿಗುರಿ: ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅವಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

ಮುಖ್ಯಮುಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರ ಆಲೋಚನೆಗಳು ಬಹಿರಂಗವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು, ದೀದಿಗೆ ಆಪ್ತರಾದ ನಾಯಕರೊಬ್ಬರು ಎಸ್‌ಸಿ ಸಮುದಾಯವನ್ನು ಅಮಾನಿಸುವುದನ್ನು ಕಾಣಬಹುದಾಗಿದೆ. ಬಂಗಾಳದ ಎಸ್‌ಸಿ ಸಮುದಾಯವು ಭಿಕ್ಷುಕರಂತೆ ವರ್ತಿಸುತ್ತಿದೆ ಎಂದು ಹೇಳಲಾಗಿದೆ. ದೀದಿ, ಅಷ್ಟೊಂದು ದುರಂಹಕಾರವೇ? ಎಂತಹ ಚಿಂತನೆ! ಎಂದು ಸಿಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಆರೋಪಿಸಿದ್ದಾರೆ.

ಸೋಲು ಖಚಿತ ಎಂಬುದು ತಿಳಿದಾಗ ನನ್ನಮೇಲೆ ದೀದಿ ಅವರ ಕೋಪ ಹೆಚ್ಚಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ನನ್ನ ಮೇಲಿನ ಬಂಗಾಳದ ಜನರ ವಾತ್ಸಲ್ಯವನ್ನು ನೋಡಿ ಮಮತಾ, ಬಂಗಾಳದ ಜನತೆಯ ಮೇಲೆ ಸಿಟ್ಟಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಟಿಎಂಸಿ ಗೂಂಡಾಗಳಿಗೆ ಈ ಬಾರಿ ನಕಲಿ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಮತಾ ಆಕ್ರೋಶಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಎಂದಿಗೂ ತಮ್ಮ ರಿಪೋರ್ಟ್ ಕಾರ್ಡ್ ತೋರಿಸಿಲ್ಲ. ತಮ್ಮ, ತಮ್ಮ ಸೋದರಳಿಯ ಹಾಗೂ ಗೂಂಡಾ ಕೃತ್ಯಗಳ ಬಗ್ಗೆ ವಿವರವನ್ನು ನೀಡಲಿ ಎಂದು ಹೇಳಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದೆಯೋ ಅದೇ ರೀತಿ ಸರ್ಕಾರ ಕೆಲಸ ಮಾಡಲಿದೆ. ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರವು ಎಲ್ಲರಿಗೂ ಸಾವಿರಾರು ಕೋಟಿ ರೂಪಾಯಿಗಳನ್ನು ರವಾನಿಸಿದೆ. ಬಂಗಾಳದ ಬಿಜೆಪಿ ಸರ್ಕಾರ ಅದೇ ಪಾರದರ್ಶಕತೆಯಿಂದ ಕೆಲಸ ಮಾಡಲಿದೆ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ತಡೆಹಿಡಿದಿರುವ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂಬ ಭರವಸೆಯನ್ನು ಮೋದಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.