
ದಿಲೀಪ್ ಘೋಷ್
ಕೋಲ್ಕತ್ತ: ಮುಂದಿನ ಏಪ್ರಿಲ್‌ನಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಬೇಕು ಎಂದು ನಿಶ್ಚಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಜ್ಯ ಘಟಕ ಆರಂಭಿಸಿರುವ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದರು.
ಮಹತ್ವದ ಬೆಳವಣಿಗೆಯಲ್ಲಿ, ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಕೇಸರಿ ಪಾಳಯದ ಪ್ರಮುಖ ಮುಖವಾಗಿ ಶಾ ಸೂಚ್ಯವಾಗಿ ಬಿಂಬಿಸಿರುವುದು ಗಮನಾರ್ಹ.
ಪಕ್ಷದ ಹಾಲಿ ಹಾಗೂ ಮಾಜಿ ಚುನಾಯಿತ ಪ್ರತಿನಿಧಿಗಳೊಂದಿಗೆ ರಹಸ್ಯ ಸಭೆ ನಡೆಸಿದ ಶಾ, ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಲವು ಸೂಚನೆಗಳನ್ನು ನೀಡಿದರು ಎಂದು ಬಿಜೆಪಿ ರಾಜ್ಯ ಘಟಕದ ಮುಖಂಡರೊಬ್ಬರು ಸಭೆ ಬಳಿಕ ತಿಳಿಸಿದರು.
ದಿಲೀಪ್ ಘೊಷ್, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಕಾಂತ ಮಜುಂದಾರ್, ಹಾಲಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಶಾ ಪ್ರತ್ಯೇಕ ಸಭೆ ನಡೆಸಿದರು. ಪಕ್ಷದ ಹಿರಿಯ ನಾಯಕರು ಹಾಗೂ ಹೊಸಬರ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಶಾ ಈ ಸಭೆ ನಡೆಸಿದರು ಎಂದು ಮತ್ತೊಬ್ಬ ನಾಯಕ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಪಕ್ಷದ ವೀಕ್ಷಕರಾದ ಸುನಿಲ್ ಬನ್ಸಾಲ್, ಭೂಪೇಂದ್ರ ಯಾದವ್, ಬಿಪ್ಲಬ್ ದೇವ್ ಹಾಗೂ ಅಮಿತ್ ಮಾಳವೀಯಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್,‘ಸಭೆ ಕುರಿತಂತೆ ಹೆಚ್ಚಿಗೆ ಹೇಳುವುದಿಲ್ಲ. ನನ್ನ ಅನುಭವ ಹಾಗೂ ಅಭಿಪ್ರಾಯಗಳನ್ನು ಆಲಿಸಲು ಕರೆದಿದ್ದರು. ಮುಂದಿನ ವರ್ಷದ ಚುನಾವಣೆ ವೇಳೆ ನೀವು ಸಕ್ರಿಯ ದಿಲೀಪ್ ಘೋಷ್‌ನನ್ನು ಕಾಣುವಿರಿ ಎಂದಷ್ಟೆ ಹೇಳಬಲ್ಲೆ’ ಎಂದು ಪ್ರತಿಕ್ರಿಯಿಸಿದರು.
ಸ್ವಾಮಿ ವಿವೇಕಾನಂದ, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ ಟ್ಯಾಗೋರ್ ಸೇರಿ ಹಲವು ಧೀಮಂತರ ಕುರಿತು ಸಭೆಯಲ್ಲಿ ಶಾ ಉಲ್ಲೇಖಿಸಿದರು ಎಂದೂ ತಿಳಿಸಿದ್ದಾರೆ.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಉತ್ಸಾಹ ಇಮ್ಮಡಿಗೊಂಡಿದೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ. ರಾಜ್ಯದಲ್ಲಿ ಬದಲಾವಣೆ ತರುತ್ತೇವೆಸುವೇಂದು ಅಧಿಕಾರಿ ವಿಧಾನಸಭೆ ವಿಪಕ್ಷ ನಾಯಕ
ಶಾ ನೀಡಿದ ಸೂಚನೆಗಳು
ಪಕ್ಷದ ಚುನಾಯಿತ ಪ್ರತಿನಿಧಿಗಳು ವಾರದಲ್ಲಿ ಕನಿಷ್ಠ ನಾಲ್ಕು ದಿನ ತಮ್ಮ ಕ್ಷೇತ್ರಗಳಲ್ಲಿ ಇರಬೇಕು. ಈ ಅವಧಿಯಲ್ಲಿ ಕನಿಷ್ಠ ಐದು ಬೀದಿ ಬದಿ ಸಭೆಗಳನ್ನು ಆಯೋಜಿಸಬೇಕು
ಟಿಕೆಟ್ ಆಕಾಂಕ್ಷಿಗಳು ಸ್ಪರ್ಧಿಸಲು ತಾವು ಏಕೆ ಅರ್ಹರು ಎಂಬುದನ್ನು ಮುಂದಿನ ಎರಡು ತಿಂಗಳಲ್ಲಿ ಸಾಬೀತುಪಡಿಸಬೇಕು
ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸಬೇಕು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಸ್ತಾರಕ’ರನ್ನು ನಿಯೋಜನೆ ಮಾಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.