
ಅಮಿತ್ ಶಾ, ಮಮತಾ ಬ್ಯಾನರ್ಜಿ
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಜಟಾಪಟಿ ಆರಂಭವಾಗಿದ್ದು, ಈಗಲೇ ಚುನಾವಣಾ ಕಾವು ಏರಿದಂತಾಗಿದೆ.
‘ಬಾಂಗ್ಲಾದೇಶದ ನುಸುಳುಕೋರರಿಗೆ ಮಮತಾ ಬ್ಯಾನರ್ಜಿ ಕುಮ್ಮಕ್ಕು ನೀಡುತ್ತಿದ್ದು, ಇದು ಪಶ್ಚಿಮ ಬಂಗಾಳದಲ್ಲಿ ಜನಸಂಖ್ಯೆಯ ಸಾಂದ್ರತೆಯನ್ನು ಅಪಾಯಕಾರಿ ಮಟ್ಟದಲ್ಲಿ ಬದಲಿಸಿದೆ’ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾ,‘ಏಪ್ರಿಲ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನುಸುಳುಕೋರರನ್ನು ದೇಶದಿಂದ ಹೊರಹಾಕುವುದೇ ಈ ಚುನಾವಣೆಯ ಮುಖ್ಯ ಕಾರ್ಯಸೂಚಿ’ ಎಂದು ಅಬ್ಬರಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ,‘ರಾಜ್ಯಕ್ಕೆ ಈ ದಿನ ದುಷ್ಯಾಶನ ಬಂದಿದ್ದಾನೆ. ಚುನಾವಣೆಗಳು ಘೋಷಣೆಯಾದಾಗಲೆಲ್ಲಾ, ಈ ದುಷ್ಯಾಶನ ಮತ್ತು ದುರ್ಯೋಧನ ರಾಜ್ಯಕ್ಕೆ ಬಂದಿಳಿಯುತ್ತಾರೆ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಟೀಕಾಪ್ರಹಾರ ನಡೆಸಿದ್ದಾರೆ.
ಬಾಂಕುರಾ ಜಿಲ್ಲೆಯ ಬರ್ಜೋರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ,‘ಜಮ್ಮು–ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯಿತು, ದೆಹಲಿಯಲ್ಲಿ ಬಾಂಬ್ ಸ್ಫೋಟಗೊಂಡಿತು. ಆದಾಗ್ಯೂ ಯಾವಾಗಲೂ ಒಳನುಸುಳಿಕೆ ವಿಚಾರವಾಗಿ ಪದೇಪದೇ ರಾಜ್ಯವನ್ನೇ ಏಕೆ ದೂಷಿಸಲಾಗುತ್ತಿದೆ’ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಮ್ಯುನಿಸ್ಟರು ಸೋತ ಬಳಿಕ ಹಿಂಸೆ ಮತ್ತು ಪ್ರತೀಕಾರದ ರಾಜಕೀಯ ನಿಲ್ಲುತ್ತದೆ ಎಂದು ನಂಬಲಾಗಿತ್ತು. ಆದರೆ ಈ ವಿಚಾರದಲ್ಲಿ ಟಿಎಂಸಿ ಆಡಳಿತ ಕಮ್ಯುನಿಸ್ಟರನ್ನೂ ಮೀರಿಸಿದೆಅಮಿತ್ ಶಾ ಕೇಂದ್ರ ಗೃಹ ಸಚಿವ
ದೇಶದ ಗೃಹ ಸಚಿವರಾಗಿ ನಿಮ್ಮ ಸಾಧನೆ ಏನು? ನೀವು ಸಂಪೂರ್ಣ ವಿಫಲರಾಗಿದ್ದು ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕುಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಅಮಿತ್ ಶಾ ಆರೋಪಗಳು
* ಒಳನುಸುಳುವಿಕೆ ಸಮಸ್ಯೆಯಿಂದ ಪಶ್ಚಿಮ ಬಂಗಾಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. 2026ರಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೇರುವ ಬಿಜೆಪಿ ಈ ಸಮಸ್ಯೆಗೆ ಅಂತ್ಯ ಹಾಡಲಿದೆ
* ಈ ಬಾರಿ ರಾಜ್ಯದ ಜನರು ಸರ್ಕಾರ ಬದಲಿಸಲು ದೃಢಸಂಕಲ್ಪ ಮಾಡಿದ್ದಾರೆ. 2026ರ ಏಪ್ರಿಲ್ 15ರಂದು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
* ನುಸುಳುಕೋರರನ್ನು ತಡೆಯುವುದಕ್ಕಾಗಿ ರಾಜ್ಯದ ಗಡಿಗಳಲ್ಲಿ ಬಲಿಷ್ಠವಾದ ‘ರಾಷ್ಟ್ರೀಯ ಗ್ರಿಡ್’ ಸ್ಥಾಪಿಸಲಾಗುವುದು. ಮನುಷ್ಯರಲ್ಲ ಪಕ್ಷಿಗಳು ಕೂಡ ಈ ಗ್ರಿಡ್‌ಗಳನ್ನು ದಾಟಿ ಬರಲು ಸಾಧ್ಯವಾಗುವುದಿಲ್ಲ
* ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನುಸುಳುವಿಕೆಯನ್ನು ಮಾತ್ರ ತಡೆಯುವುದಿಲ್ಲ. ದೇಶದಲ್ಲಿರುವ ಪ್ರತಿಯೊಬ್ಬ ನುಸುಳುಕೋರನನ್ನು ಗುರುತಿಸಿ ಹೊರ ಹಾಕಲಾಗುವುದು
* ಪಶ್ಚಿಮ ಬಂಗಾಳ ಸರ್ಕಾರ ಅಗತ್ಯವಿರುವ ಭೂಮಿ ನೀಡದ ಕಾರಣ ಭಾರತ–ಬಾಂಗ್ಲಾದೇಶ ನಡುವೆ ಬೇಲಿ ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ
* ಬಿಜೆಪಿ ಆಡಳಿತವಿರುವ ಅಸ್ಸಾಂ ತ್ರಿಪುರಾ ಅಥವಾ ಪಶ್ಚಿಮದ ರಾಜ್ಯಗಳಾದ ರಾಜಸ್ಥಾನ ಗುಜರಾತ್ ಪಂಜಾಬ್ ಮತ್ತು ಕಾಶ್ಮೀರಕ್ಕೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ನುಸುಳುವಿಕೆ ಸಮಸ್ಯೆ ಇಷ್ಟೊಂದು ತೀವ್ರವಾಗಿರುವುದು ಏಕೆ ಎಂಬ ಬಗ್ಗೆ ಮಮತಾ ಬ್ಯಾನರ್ಜಿ ಉತ್ತರಿಸಬೇಕು
* ಮತುವಾ ಸಮುದಾಯದವರು ಎಸ್‌ಐಆರ್ ಬಗ್ಗೆ ಭಯಪಡುವ ಅಗತ್ಯ ಇಲ್ಲ. ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿರುವ ಎಲ್ಲ ನಿರಾಶ್ರಿತರಿಗೂ ದೇಶದಲ್ಲಿ ಆಶ್ರಯ ನೀಡಲಾಗುವುದು. ಮತುವಾ ಸಮುದಾಯಕ್ಕೆ ಮಮತಾ ಬ್ಯಾನರ್ಜಿ ಕೂಡ ತೊಂದರೆ ಕೊಡುವುದು ಸಾಧ್ಯವಿಲ್ಲ
ಮಮತಾ ಬ್ಯಾನರ್ಜಿ ತಿರುಗೇಟು
* ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ಇದರ ನೈತಿಕ ಹೊಣೆ ಹೊತ್ತು ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
* ಒಳನುಸುಳುವಿಕೆ ಸಮಸ್ಯೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಇದೆಯೇ? ಕಾಶ್ಮೀರದಲ್ಲಿ ಇದು ನಡೆಯುತ್ತಿಲ್ಲವೇ? ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಒಳನುಸುಳುವಿಕೆ ಅಲ್ಲವೇ?
* ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟಗೊಂಡಿತ್ತು. ಪಶ್ಚಿಮ ಬಂಗಾಳ ಹೊರತುಪಡಿಸಿ ಬೇರೆ ಕಡೆ ನುಸುಳುಕೋರರು ಇಲ್ಲವೇ? ಹಾಗಾದಲ್ಲಿ ಈ ನೀವೇ ಕಾರನ್ನು ಸ್ಫೋಟಿಸಿದ್ದಾ?
* ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಾಗಿ ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ಈ ಬಾರಿಯ ಚುನಾವಣೆ ಬಳಿಕ ನೀವು ಎಲ್ಲ ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತೀರಿ
* ಅಂತರರಾಷ್ಟ್ರೀಯ ಗಡಿಯಲ್ಲಿ ಬೇಲಿ ಅಳವಡಿಸಲು ಟಿಎಂಸಿ ಸರ್ಕಾರ ಜಮೀನು ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಜಮೀನು ನೀಡಿರದಿದ್ದಲ್ಲಿ ತಾರಕೇಶ್ವರ–ವಿಷ್ಣುಪುರ ರೈಲು ಮಾರ್ಗ ಪೂರ್ಣಗೊಳಿಸಿದ್ದು ಯಾರು? ಕಲ್ಲಿದ್ದಲು ಗಣಿಗಾರಿಕೆಗೆ ಇಸಿಎಲ್‌ಗೆ ಜಮೀನು ಎಲ್ಲಿಂದ ಬಂತು?
* ಬೋಂಗಾಂವ್ ಮತ್ತು ಪೆಟ್ರಾಪೋಲ್‌ನಲ್ಲಿ ಜಮೀನು ಕೊಟ್ಟಿದ್ದು ಯಾರು? ಘೋಜಾಡಾಂಗಾ ಮತ್ತು ಚಂಗ್ರಬಂಧಾದಲ್ಲಿ ಕೈಗೊಂಡ ಕಾಮಗಾರಿಗೆ ಜಮೀನು ಕೊಟ್ಟವರು ಯಾರು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.