
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅಕ್ಷರಶಃ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಲಕಚ್ಚಿವೆ. ವಿಧಾನಸಭೆ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲಾಗದೆ ಎರಡೂ ಪಕ್ಷಗಳು ಭಾರೀ ಆಘಾತ ಅನುಭವಿಸಿವೆ. ಟಿಎಂಸಿ, ಬಿಜೆಪಿ ಅಬ್ಬರದ ನಡುವೆ ಕಾಂಗ್ರೆಸ್, ಎಡಪಕ್ಷಗಳ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದಾರೆ.
ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ಸಂಜೆ ವೇಳೆಗೆ ಟಿಎಂಸಿ 212, ಬಿಜೆಪಿ 78 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಆದರೆ, ಫಲಿತಾಂಶದ ಪಟ್ಟಿಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸುಳಿವೇ ಇಲ್ಲ. ಎಡಪಕ್ಷವೂ ಸಹ ಕೇವಲ ಏಕೈಕ ಕ್ಷೇತ್ರದಲ್ಲಿ ಮುನ್ನಡೆ ಹಿನ್ನಡೆ ಪಡೆಯುತ್ತಿದ್ದು, ಎರಡೂ ಪಕ್ಷಗಳು ಧೂಳೀಪಟವಾಗಿವೆ.
2016 ಚುನಾವಣೆಯಲ್ಲಿ ಕಾಂಗ್ರೆಸ್ 44, ಎಡಪಕ್ಷಗಳು 26 ಕ್ಷೇತ್ರಗಳನ್ನು ಉಳಿಸಿಕೊಂಡಿದ್ದವು. ಆದರೆ, ಈ ಬಾರಿ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಂತೆ ಕಾಣುತ್ತಿದೆ. 2016ರ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಂಪೂರ್ಣ ಹಿಡಿತ ಸಾಧಿಸಿದರು. ಎಡಪಕ್ಷಗಳ ಹಲವು ಸ್ಥಳಿಯ ಮುಖಂಡರು ಟಿಎಂಸಿ ಸೇರಿಕೊಂಡರು. ಹೀಗಾಗಿ, ಅಲ್ಲಿ ದೀದಿ ಹವಾ ಮಾತ್ರ ಗೋಚರಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಅಭೂತಪೂರ್ವ ಸಂಘಟನೆಯಿಂದಾಗಿ ಕಮಲ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ನೂರರ ಸಮೀಪದಲ್ಲಿದೆ. ಕಾಂಗ್ರೆಸ್, ಎಡಪಕ್ಷಗಳು ಕಳೆದುಕೊಂಡ ಸಂಖ್ಯೆಗಳು ಬಿಜೆಪಿಗೆ ಪಡೆದಂತೆ ಕಾಣುತ್ತಿದೆ.
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಅವರು, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೆ ಕಾಂಗ್ರೆಸ್ ಮತ್ತು ಸಿಪಿಐ ಶರಣಾಗಿವೆ ಎಂದು ಟೀಕಿಸಿದ್ದಾರೆ.
‘ನಾವು ಮೂರು ಸ್ಥಾನಗಳೊಂದಿಗೆ ಪ್ರಾರಂಭಿಸಿ ಈಗ ಈ ಹಂತಕ್ಕೆ ಬಂದಿದ್ದೇವೆ. ಇದು ಸಾಧಾರಣ ಸಾಧನೆಯಲ್ಲ. ದೇಶದ ಯಾವುದೇ ರಾಜಕೀಯ ಪಕ್ಷವು ಇಂತಹ ಸಾಧನೆ ಮಾಡಿದ ಉದಾಹರಣೆಯಿಲ್ಲ. ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ನಾವು ನಿರಾಶೆಗೊಂಡಿಲ್ಲ’ ಎಂದು ಇಂಡಿಯಾ ಟುಡೆ ಜೊತೆಗಿನ ಸಂವಾದದ ಸಂದರ್ಭದಲ್ಲಿ ವಿಜಯವರ್ಗಿಯ ಹೇಳಿದ್ದಾರೆ. .
‘ಮೊದಲ ನಾಲ್ಕು ಸುತ್ತಿನ ಮತ ಎಣಿಕೆಯಲ್ಲಿ ನಾವು ಮುನ್ನಡೆ ಕಾಯ್ದಕೊಂಡಿದ್ದೆವು. ನಂತರದ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಬಿಜೆಪಿಯನ್ನು ತಡೆಯಲು ಕಾಂಗ್ರೆಸ್ ಮತ್ತು ಸಿಪಿಐ (ಎಂ) ಪಕ್ಷಗಳು ಟಿಎಂಸಿ ಮುಂದೆ ಶರಣಾಗಿವೆ’ ಎಂದು ವಿಜಯವರ್ಗಿಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.