ADVERTISEMENT

ಮುರ್ಶಿದಾಬಾದ್‌ ಗಲಭೆ | ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಿದ ರಾಜ್ಯಪಾಲ ಬೋಸ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 9:31 IST
Last Updated 19 ಏಪ್ರಿಲ್ 2025, 9:31 IST
<div class="paragraphs"><p>ಹಿಂಸಾಚಾರ ಪೀಡಿತ ಪ್ರದೇಶಗಳಿಗೆ&nbsp;ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಭೇಟಿ ನೀಡಿದರು.</p></div>

ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಭೇಟಿ ನೀಡಿದರು.

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟ ಕುಟುಂಬದ ಸದಸ್ಯರನ್ನು ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಶನಿವಾರ ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ.

ಮೃತರ ಕುಟುಂಬದ ಸದಸ್ಯರೊಂದಿಗೆ ಬೋಸ್‌ ಮಾತನಾಡಿ, ಧೈರ್ಯ ತುಂಬಿದರು. ಕೊಲೆ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಹಿಂಸಾಚಾರದ ವೇಳೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದರು. ಜಾಫ್ರಾಬಾದ್ ಪ್ರದೇಶದ ಮನೆಯೊಂದರಲ್ಲಿ ಚಾಕು ಇರಿತದ ಗಾಯಗಳೊಂದಿಗೆ ಹರೋಗೋಬಿಂದೋ ದಾಸ್ ಮತ್ತು ಚಂದನ್ ದಾಸ್ ಶವಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.

ಜಿಲ್ಲೆಯ ಧುಲಿಯನ್, ಸುಟಿ ಮತ್ತು ಜಂಗಿಪುರದ ಹಿಂಸಾಚಾರ ಪೀಡಿತ ಸ್ಥಳಗಳಿಗೂ ಬೋಸ್ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಮುರ್ಶಿದಾಬಾದ್‌ನ ಕೆಲವು ಪ್ರದೇಶಗಳಲ್ಲಿ ನಡೆಸಲಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಧುಲಿಯನ್‌ನ ಮಂದಿರಪಾರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ನೂರಾರು ಮಹಿಳೆಯರು ರಕ್ಷಣೆಗಾಗಿ ತಮ್ಮ ಮನೆಗಳನ್ನು ತೊರೆದು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರವಾಸವನ್ನು ಮುಂದೂಡುವಂತೆ ರಾಜ್ಯ‍ ಪಾಲರಿಗೆ ಮನವಿ ಮಾಡಿದ್ದರು. ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಬಹುದು ಎಂದು ತಿಳಿಸಿದ್ದರು. ಆದರೆ ಬ್ಯಾನರ್ಜಿ ಅವರ ಮನವಿಯನ್ನು ಧಿಕ್ಕರಿಸಿ ಭೇಟಿ ನೀಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಮುಸ್ಲಿಂ ಬಾಹುಳ್ಯವಿರುವ ಮುರ್ಶಿದಾಬಾದ್‌ನಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಏಪ್ರಿಲ್‌ 8ರಿಂದ 12ರವರೆಗೆ  ನಡೆದ ಹಿಂಸಾಚಾರದಲ್ಲಿ ತಂದೆ–ಮಗ ಸೇರಿ ಮೂವರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 274 ಮಂದಿಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.