ನವದೆಹಲಿ: ಕಾಶ್ಮೀರಿ ಪಂಡಿತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಗುತ್ತಿರುವ 'ಭಾರತ್ ಜೋಡೊ ಯಾತ್ರೆ'ಯ ವೇಳೆ ಕಾಶ್ಮೀರಿ ಪಂಡಿತರೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಕಾಶ್ಮೀರಿ ಪಂಡಿತ ಸಮುದಾಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಹೊರತುಪಡಿಸಿ, ಅವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
'ನಮ್ಮನ್ನು ರಾಜಕೀಯವಾಗಿ ಬಳಸುವುದನ್ನು ಬಿಟ್ಟು ನೀವು ನಮಗಾಗಿ ಏನು ಮಾಡಿದ್ದೀರಿ? ಎಂದು ಕಾಶ್ಮೀರಿ ಪಂಡಿತರು ಬಿಜೆಪಿ ಸರ್ಕಾರವನ್ನು ಕೇಳುತ್ತಿದ್ದಾರೆ. ನಿಮ್ಮ ಬಳಿ ಉತ್ತರವಿದೆಯೇ, ಪ್ರಧಾನಿಯವರೇ?' ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಕಾಶ್ಮೀರಿ ಪಂಡಿತರ ಸಮಸ್ಯೆಗಳು ಜೀವಂತವಾಗಿರಬೇಕು ಎಂದು ಬಿಜೆಪಿ ಬಯಸುತ್ತಿದೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ನಂತರ ಯಾವುದೇ ಕಲ್ಯಾಣ ಕ್ರಮಗಳನ್ನು ಜಾರಿಗೊಳಿಸಿಲ್ಲ' ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಶ್ಮೀರಿ ಪಂಡಿತರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ರಾಹುಲ್ ಹಂಚಿಕೊಂಡಿರುವ ವಿಡಿಯೊದಲ್ಲಿದೆ.
ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೊ ಯಾತ್ರೆ'ಗೆ ಕಾಶ್ಮೀರದಲ್ಲಿ ಅಗಾಧ ಬೆಂಬಲ ಲಭಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಯಾತ್ರೆಯು ನಾಳೆ ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.