ADVERTISEMENT

ನನ್ನನ್ನು ಕೆಟ್ಟದಾಗಿ ಬಿಂಬಿಸಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ: ರಾಹುಲ್ ಗಾಂಧಿ

ಐಎಎನ್ಎಸ್
Published 8 ಅಕ್ಟೋಬರ್ 2022, 14:47 IST
Last Updated 8 ಅಕ್ಟೋಬರ್ 2022, 14:47 IST
   

ತುಮಕೂರು: ನನ್ನನ್ನು ಕೆಟ್ಟದಾಗಿ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದುಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು'ಭಾರತ ಜೋಡಿಸಿ ಯಾತ್ರೆ' ವೇಳೆಶನಿವಾರ ಹೇಳಿದ್ದಾರೆ.

ಯಾತ್ರೆ ಶನಿವಾರ ತುಮಕೂರುಜಿಲ್ಲೆಗೆ ಪ್ರವೇಶಿಸಿದೆ. ತುರುವೇಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರಾಹುಲ್‌, ನಾನು ಯಾವಾಗಲೂ ಆದರ್ಶಗಳ ಪರ ನಿಲ್ಲುತ್ತೇನೆ. ಇದು ಸಹಜವಾಗಿಯೇ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಇತರ ಶಕ್ತಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ನನ್ನನ್ನು ಕೆಟ್ಟರೀತಿಯಲ್ಲಿ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ನಾನು ಯಾವುದರ ಪರ ಇದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದನ್ನು ಎಚ್ಚರಿಕೆಯಿಂದ ನೋಡುವ ಜನರು ಜಾಗರೂಕವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಯಾತ್ರೆಯು ನನ್ನ ಪಾಲಿಗೆ ಖಂಡಿತಾ ರಾಜಕೀಯದ ಭಾಗವೇ. ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಈ ಯಾತ್ರೆಯ ಉದ್ದೇಶ. ನಾನು ಈ ಮಾತನ್ನು ಸುಮ್ಮನೆ ಹೇಳುತ್ತಿಲ್ಲ. ರಾಜಕಾರಣಿಗಳು ಮತ್ತು ನಮ್ಮ ನಾಗರಿಕರ ನಡುವೆ ಬಹುದೊಡ್ಡ ಅಂತರ ಬೆಳೆದುಕೊಂಡಿದೆ.ಬೀದಿಗಿಳಿದು ಜನರನ್ನು ಸಂಪರ್ಕಿಸುವುದು ಹಾಗೂ ಆ ಮೂಲಕ ಅವರೊಂದಿಗೆ ಹೆಚ್ಚು ಆಪ್ತವಾಗಿ ಮಾತನಾಡುವುದು, ನೋವು, ಸಂಕಷ್ಟಗಳನ್ನು ಅರಿಯುವುದು ನನ್ನ ಉದ್ದೇಶ. ಕಾರು ಇಲ್ಲವೇ ವಿಮಾನದ ಮೂಲಕ ಸಾಗುವುದು ಅಥವಾ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದಕ್ಕಿಂತ ಇದು ಭಿನ್ನವಾದ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ್‌ ಜೋಡೊ ಯಾತ್ರೆಯ ಉದ್ದೇಶ ಭಾರತವನ್ನು ಒಗ್ಗೂಡಿಸುವುದು. 2024ರ ಸಾರ್ವತ್ರಿಕ ಚುನಾವಣೆಯಲ್ಲ ಎಂಬುದನ್ನು ಮತ್ತೊಮ್ಮೆ ಹೇಳಿರುವ ರಾಹುಲ್‌, ಭಾರತ ಹೇಗೆ ಒಡೆದುಹೋಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಹಿಂಸೆ ಹರಡುತ್ತಿದೆ. ಇದು ದೇಶಕ್ಕೆ ಹಾನಿ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯಾತ್ರೆಯನ್ನು ಮೂರು ಮುಖ್ಯ ಮೂಲಭೂತ ವಿಚಾರಗಳ ಮೇಲೆ ಕೊಂಡೊಯ್ಯಲಾಗುತ್ತಿದೆ. ಮೊದಲನೆಯದು,ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹರಡುತ್ತಿರುವ ದ್ವೇಷ,ಹಿಂಸೆ ದೇಶವನ್ನು ವಿಭಜಿಸುತ್ತಿದೆ. ಎರಡನೆಯದು, ಅವರು (ಬಿಜೆಪಿ) ಅನುವು ಮಾಡಿಕೊಟ್ಟಿರುವ ಸಂಪತ್ತಿನ ಕ್ರೂಢೀಕರಣ. ಇದು ಕೆಲವೇ ಕೆಲವರು ಅತ್ಯಂತ ಶ್ರೀಮಂತರಾಗಲು ಕಾರಣವಾಗುತ್ತಿದೆ. ದೇಶದ ಆರ್ಥಿಕತೆಯ ಬೆನ್ನುಮೂಳೆ ಮುರಿಯುತ್ತಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಗಳು ಮತ್ತು ರೈತರು ನಾಶವಾಗುತ್ತಿದ್ದಾರೆ. ಇದರ ಫಲವಾಗಿ ನಿರುದ್ಯೋಗ ಸೃಷ್ಟಿಯಾಗುತ್ತಿದೆ. ದೇಶವು ಭಾರೀ ನಿರುದ್ಯೋಗ ಸಮಸ್ಯೆಯತ್ತ ಸಾಗುತ್ತಿದೆ. ಮೂರನೆಯದು ಬೆಲೆಗಳು ಅಪಾರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಎಂದು ವಿವರಿಸಿದ್ದಾರೆ.

ಕಾಂಗ್ರೆಸ್‌ ನಾಯಕರು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ ರಾಹುಲ್‌, ಬಿಜೆಪಿ ಮತ್ತು ಆರ್‌ಎಸ್‌ಎಸ್‌, ದೇಶದ ತನಿಖಾಸಂಸ್ಥೆಗಳನ್ನು ರಾಜಕೀಯ ಪಕ್ಷಗಳು ಅಥವಾ ನಾಯಕರ ವಿರುದ್ಧ ಬಳಸಿಕೊಳ್ಳುತ್ತಿವೆಎಂಬುದು ನಮಗೆಲ್ಲ ಗೊತ್ತೇ ಇದೆ. ಈ ತಂತ್ರವನ್ನು ಬಳಸುವ ಮೂಲಕ ಸರ್ಕಾರಗಳನ್ನು ಹೇಗೆ ಉರುಳಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ವಿವರವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.