
ಶ್ರೀನಗರ: ದೆಹಲಿ ಸ್ಫೋಟ ಮತ್ತು ಅಲ್ ಫಲಾಹ್ ವಿಶ್ವವಿದ್ಯಾಲಯದ ‘ವೈಟ್ ಕಾಲರ್ ಭಯೋತ್ಪಾದನೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಮೂವರು ವೈದ್ಯರ ಕಥೆ ಒಂದಾದರೆ, ಇನ್ನೊಂದೆಡೆ ಇವರಿಗೆ ಮನೆಯನ್ನು ಬಾಡಿಗೆಗೆ ನೀಡಿದ ಹರಿಯಾಣದ ಧರ್ಮ ಬೋಧಕ ಮೌಲ್ವಿ ಇಷ್ತಿಯಾಕ್ ಕಥೆಯೇ ಬೇರೆ.
ಆರೋಪಿಗಳಾದ ಅಲ್– ಫಲಾಹ್ ವಿಶ್ವವಿದ್ಯಾಲಯದ ಡಾ. ಉಮರ್ ನಬಿ, ಡಾ. ಮುಜಮ್ಮಿಲ್ ಗನಿ ಮತ್ತು ಡಾ. ಶಾಹೀನ್ ಅವರು, ವಿವಿ ಕ್ಯಾಂಪಸ್‌ನ ಹೊರಗೆ ಇರುವ ಮೌಲ್ವಿ ಇಷ್ತಿಯಾಕ್‌ಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.
ದೆಹಲಿ ಸ್ಫೋಟದ ನಂತರ ನಡೆದ ಕಾರ್ಯಾಚರಣೆ ವೇಳೆ ಈ ಮನೆಯಿಂದ ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ಕ್ಲೋರೇಟ್, ಸಲ್ಫರ್ ಸೇರಿದಂತೆ 2,500 ಕೆ.ಜಿಯಷ್ಟು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಹೀಗಾಗಿ ಆರೋಪಿಗಳ ಜತೆಗೆ ಕಟ್ಟಡ ಮಾಲೀಕ ಮೌಲ್ವಿ ಇಷ್ತಿಯಾಕ್‌ನನ್ನೂ ಪೊಲೀಸರು ಬಂಧಿಸಿದ್ದರು.
ಆದರೆ, ‘ಆರೋಪಿಗಳು ಮನೆಯಲ್ಲಿ ರಸಗೊಬ್ಬರ ದಾಸ್ತಾನು ಇಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಹೆಚ್ಚುವರಿಯಾಗಿ ₹2,500 ಬಾಡಿಗೆ ಕೊಡಲು ಒಪ್ಪಿದ್ದರು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನಾನು ಬಾಡಿಗೆ ಆಸೆಯಿಂದ ಒಪ್ಪಿದ್ದೆ’ ಎಂದು ಮೌಲ್ವಿ ಇಷ್ತಿಯಾಕ್ ವಿಚಾರಣೆ ವೇಳೆ ಪೊಲೀಸರ ಎದುರು ಹೇಳಿದ್ದಾರೆ.
‘ತನಗೆ ಸೇರಿದ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದರ ಗಂಭೀರತೆಗಿಂತಲೂ, ಮೌಲ್ವಿ ಇಷ್ತಿಯಾಕ್‌ಗೆ ಬಾಕಿ ಉಳಿದಿರುವ ಬಾಡಿಗೆಯದ್ದೇ ಚಿಂತೆಯಾಗಿದೆ. ಈತನ ಕುಟುಂಬ ಬಡತನ ರೇಖೆಗಿಂತಲೂ ಕೆಳಗಿದ್ದು, ನಾಲ್ಕು ಮಕ್ಕಳ ಕುಟುಂಬವನ್ನು ಸಲಹಲು ಹೆಣಗಾಡುತ್ತಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 6 ತಿಂಗಳಿಂದ ಬಾಕಿ ಉಳಿಸಿರುವ ಬಾಡಿಗೆ ವಸೂಲಿ ಮಾಡಿಕೊಟ್ಟರೆ ಅದನ್ನು ತನ್ನ ಮನೆಗೆ ಕಳುಹಿಸುತ್ತೇನೆ, ಅದೇ ತನ್ನ ಕುಟುಂಬಕ್ಕೆ ದೊಡ್ಡ ಆಸರೆಯಾಗುತ್ತದೆ ಎನ್ನುವುದಾಗಿಯೂ ಆತ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ ಮುಂದೆ ಕೈಮುಗಿದು ಕೇಳಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
‘ವೈಟ್‌ಕಾಲರ್ ಭಯೋತ್ಪಾದನೆ’ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಮೂವರು ವೈದ್ಯರೂ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ. ಮೌಲ್ವಿ ಇಷ್ತಿಯಾಕ್‌ನನ್ನು ಶೀಘ್ರವೇ ರಾಜ್ಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಅಲ್– ಫಲಾಹ್ ವಿಶ್ವವಿದ್ಯಾಲಯದ ಡಾ. ಉಮರ್ ನಬಿ ಡಾ. ಮುಜಮ್ಮಿಲ್ ಗನಿ ಮತ್ತು ಡಾ. ಶಾಹೀನ್ ಅವರು 2019ರಲ್ಲೇ ‘ವೈಟ್‌ಕಾಲರ್ ಭಯೋತ್ಪಾದನೆ’ಗೆ ಕಾರ್ಯಯೋಜನೆ ರೂಪಿಸಿದ್ದರು. ತಮ್ಮ ಚಟುವಟಿಕೆಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಆರೋಪಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
ಗಡಿಯಾಚೆಗಿನ ಭಯೋತ್ಪಾದನಾ ಕಾರ್ಯವಿಧಾನದಲ್ಲಿ ಬದಲಾವಣೆ ತಂದು ಉನ್ನತ ಶಿಕ್ಷಣ ಪಡೆದವರು ವೃತ್ತಿಪರರನ್ನು ಬಳಸಿಕೊಂಡು ಸಂಪೂರ್ಣ ಡಿಜಿಟಲ್ ವಿಧಾನದ ಮೂಲಕ ಗಡಿಯಾಚೆಯಿಂದಲೇ ಕಾರ್ಯನಿರ್ವಹಿಸುವ ‘ವೈಟ್‌ಕಾಲರ್ ಭಯೋತ್ಪಾದನೆ’ಯ ಹೊಸ ಮಾದರಿಯನ್ನು ಈ ತಂಡ ಹುಟ್ಟುಹಾಕಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಅಲ್– ಫಲಾಹ್ ವಿಶ್ವವಿದ್ಯಾಲಯದ ‘ವೈಟ್‌ಕಾಲರ್ ಭಯೋತ್ಪಾದನೆ’ಗೂ ಪಾಕಿಸ್ತಾನಕ್ಕೂ ಇರುವ ನಂಟಿನ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಮುಜಮ್ಮಿಲ್ ಗನಿ ಡಾ. ಆದಿಲ್ ರ್‍ಯಾಥರ್ ಡಾ.ಮುಜಾಫರ್ ರ್‍ಯಾಥರ್ ಡಾ. ಉಮರ್ ನಬಿ ಅವರು ಟೆಲಿಗ್ರಾಂ ಫೇಸ್‌ಬುಕ್ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿಎಸ್) ತಯಾರಿಸುವುದು ಹೇಗೆ ಎನ್ನುವುದರ ಕುರಿತು ಆರೋಪಿಗಳು ಯೂಟ್ಯೂಬ್‌ನಿಂದ ಮಾಹಿತಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.