ADVERTISEMENT

ವೈಟ್ ಕಾಲರ್‌ ಭಯೋತ್ಪಾದನೆ ಜಾಲ: ಕಾರು ಸ್ಫೋಟ ಆರೋಪಿ ಶಾಹೀನ್‌ ಜತೆ ರಮೀಜ್‌ ಸಂಪರ್ಕ

ಪಿಟಿಐ
Published 12 ಜನವರಿ 2026, 16:17 IST
Last Updated 12 ಜನವರಿ 2026, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಕಿಂಗ್‌ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯ ರಮೀಜ್‌ ಮಲಿಕ್‌, ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ಆರೋಪಿ ವೈದ್ಯೆ ಶಾಹೀನ್‌ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗಿದೆ. 

ನಿಷೇಧಿತ ಇಸ್ಲಾಮಿಕ್‌ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜತೆಗೂ ರಮೀಜ್‌ ಸಂಪರ್ಕದಲ್ಲಿದ್ದರು. ಪರಾರಿಯಾಗುವ ಸಂದರ್ಭದಲ್ಲಿ ಪಿಎಫ್‌ಐನಿಂದ ಕಾನೂನು ಸಹಾಯವನ್ನು ಕೋರಿದ್ದರು. ಇಸ್ಲಾಂ ಧರ್ಮಗುರು ಜಾಕಿರ್‌ ನಾಯ್ಕ್‌ ಅವರನ್ನು ತನ್ನ ಆದರ್ಶ ವ್ಯಕ್ತಿ ಎಂದೂ ಪರಿಗಣಿಸಿದ್ದರು ಎಂದು ಮೂಲಗಳು ತಿಳಿಸಿವೆ. 

ರಮೀಜ್‌ ಕುರಿತು ಮಾಹಿತಿ ನೀಡುವಂತೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆಯು ಪೊಲೀಸರನ್ನು ಕೇಳಿದೆ. 

ADVERTISEMENT

‘ಸೆಮಿನಾರ್‌ ಮತ್ತು ಕಾನ್ಫರೆನ್ಸ್‌ಗಳಿಗೆ ತೆರಳಿದ್ದ ಸಂದರ್ಭದಲ್ಲಿ ವೈದ್ಯೆ ಶಾಹೀನ್‌ ಸಯೀದ್ ಪರಿಚಯವಾಯಿತು. ಬಳಿಕ ಕರೆ ಮಾಡಿ ಮಾತನಾಡುತ್ತಿದ್ದೆವು’ ಎಂದು ವಿಚಾರಣೆ ವೇಳೆ ರಮೀಜ್‌ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. 

ಶಾಹೀನ್‌ ಸಯೀದ್ ಬಳಿ ಇದ್ದ ಎಕೆ–4 ರೈಫಲ್‌, ಮದ್ದುಗುಂಡುಗಳು ಹಾಗೂ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ‘ವೈಟ್ ಕಾಲರ್’ ಭಯೋತ್ಪಾದಕ ಜಾಲದ ಭಾಗವಾಗಿದ್ದಾಳೆ ಎಂದು ಆರೋಪಿಸಲಾಗಿದೆ. 

ಆಗ್ರಾ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ ರಮೀಜ್‌ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದ. ಬಳಿಕ ಆಕೆ ಇಸ್ಲಾಂಗೆ ಮತಾಂತರಗೊಂಡರು. ರಮೀಜ್‌ ಹಾಗೂ ಈತನ ಸಹಚರರು ಮತಾಂತರವನ್ನು ಉತ್ತೇಜಿಸುವ ಸಲುವಾಗಿ ಕಿಂಗ್‌ ಜಾರ್ಜ್‌ ವಿಶ್ವವಿದ್ಯಾಲಯದ ಹಾಸ್ಟಲ್‌ನಲ್ಲಿ ಇಸ್ಲಾಂ ಧರ್ಮ ಗುರುಗಳಿಂದ ಪ್ರವಚನವನ್ನೂ ಆಯೋಜಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 

ಮದುವೆಯಾಗುವುದಾಗಿ ನಂಬಿಸಿ, ಹಿಂದೂ ವೈದ್ಯೆ ಮೇಲೆ ರಮೀಜ್‌ ಲೈಂಗಿಕ ಶೋಷಣೆ ಎಸಗಿದ್ದಾರೆ ಎನ್ನಲಾಗಿದೆ. ರಮೀಜ್‌ಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಷಯ ತಿಳಿದು ವೈದ್ಯೆ ದೂರು ನೀಡಿದ್ದಾರೆ. 

ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.