ADVERTISEMENT

₹ ಚಿಹ್ನೆ ವಿನ್ಯಾಸಗೊಳಿಸಿದ ಉದಯ್ ಕುಮಾರ್ ಯಾರು? ವಿವಾದದ ಬಗ್ಗೆ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2025, 7:59 IST
Last Updated 14 ಮಾರ್ಚ್ 2025, 7:59 IST
<div class="paragraphs"><p>ಐಐಟಿ ಗುವಾಹಟಿಯ ಪ್ರಾಧ್ಯಾಪಕ ಡಿ. ಉದಯ್‌ ಕುಮಾರ್</p></div>

ಐಐಟಿ ಗುವಾಹಟಿಯ ಪ್ರಾಧ್ಯಾಪಕ ಡಿ. ಉದಯ್‌ ಕುಮಾರ್

   

ಚಿತ್ರಕೃಪೆ: X/@AskAnshul

ತಮಿಳುನಾಡು ಸರ್ಕಾರವು 2025–26ನೇ ಸಾಲಿನ ಬಜೆಟ್‌ ಮಂಡನೆಗೂ ಮುನ್ನ ತನ್ನದೇ ರೂಪಾಯಿ ಚಿಹ್ನೆಯನ್ನು ಪ್ರಕಟಿಸಿದೆ. ಇದು, ಹಿಂದಿ ಹೇರಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಕೆ ವಿಚಾರವಾಗಿ ಕೇಂದ್ರ ಸರ್ಕಾರದೊಡನೆ ನಡೆಸುತ್ತಿರುವ ಭಾಷಾ ಸಮರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ADVERTISEMENT

ತಮಿಳುನಾಡು ವಿಧಾನಸಭೆಯಲ್ಲಿ ಹಣಕಾಸು ಸಚಿವ ತಂಗಂ ತೆನ್ನರಸು ಅವರು ಇಂದು ಮಂಡಿಸಿರುವ ಬಜೆಟ್‌ ಪತ್ರಿಗಳಲ್ಲಿ ₹ ಚಿಹ್ನೆಗೆ ಬದಲಾಗಿ, ತಮಿಳು ಅಕ್ಷರ 'ರೂ' ಅನ್ನೇ ಮುದ್ರಿಸಲಾಗಿದೆ.

ಭಾರತದ ಕರೆನ್ಸಿಯಲ್ಲಿ ಅಳವಡಿಸಿಕೊಳ್ಳಲಾಗಿರುವ ಮೂಲ ಚಿಹ್ನೆ '₹' ಅನ್ನು ವಿನ್ಯಾಸಗೊಳಿಸಿರುವ ಐಐಟಿ ಗುವಾಹಟಿಯ ಪ್ರಾಧ್ಯಾಪಕ ಡಿ. ಉದಯ್‌ ಕುಮಾರ್ ಅವರು, ಈ ವಿವಾದದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ವಿಶೇಷವೆಂದರೆ, ಅವರು ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆಯ ಮಾಜಿ ಶಾಸಕರ ಮಗ. ಆದಾಗ್ಯೂ, ರಾಜ್ಯ ಸರ್ಕಾರ, ಈ ಚಿಹ್ನೆಗೆ ಕೋಕ್‌ ನೀಡಿದೆ.

'₹' ಚಿಹ್ನೆ ವಿನ್ಯಾಸಕ ಉದಯ್‌ ಕುಮಾರ್‌ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

  • ಐಐಟಿ ಗುವಾಹಟಿಯಲ್ಲಿ ಪ್ರಾಧ್ಯಾಪಕರಾಗಿರುವ ಉದಯ್‌ ಕುಮಾರ್‌ ಧರ್ಮಲಿಂಗಮ್‌ ಅವರು ವಿನ್ಯಾಸಗೊಳಿಸಿರುವ '₹' ಚಿಹ್ನೆಯನ್ನು 2010ರಲ್ಲಿ ಭಾರತದ ಕರೆನ್ಸಿಗೆ ಅಳವಡಿಸಿಕೊಳ್ಳಲಾಯಿತು. ಅಂತಿಮ ಪಟ್ಟಿಯಲ್ಲಿ ಒಟ್ಟು ಐದು ಚಿಹ್ನೆಗಳಿದ್ದವು.

  • ಉದಯ್‌ ಕುಮಾರ್‌ ಅವರ ತಂದೆ ಎನ್‌. ಧರ್ಮಲಿಂಗಮ್‌ ಅವರು 1971ರ ವಿಧಾನಸಭೆ ಚುನಾವಣೆಯಲ್ಲಿ ರಿಶಿವಂದಿಯಮ್‌ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿದ್ದರು.

  • ಚೆನ್ನೈನ ಲಾ ಚಾಟೆಲೈನ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಉದಯ್‌, 2001ರಲ್ಲಿ ಅಣ್ಣಾ ವಿಶ್ವ ವಿದ್ಯಾಲಯದಿಂದ ವಾಸ್ತುಶಿಲ್ಪ ವಿಷಯದಲ್ಲಿ ಪದವಿ ಪಡೆದಿದ್ದಾರೆ.

  • ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದಿಂದ ದೃಶ್ಯ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಅಲ್ಲಿಯೇ ಅದೇ ವಿಷಯದ ಮೇಲೆ ಪಿಎಚ್‌ಡಿ ಮಾಡಿದ್ದಾರೆ.

'₹' ಚಿಹ್ನೆ ವಿನ್ಯಾಸಕ್ಕೆ ₹2.5 ಲಕ್ಷ ಬಹುಮಾನ
ಉದಯ್‌ ಕುಮಾರ್‌ ಅವರೇ ಹೇಳುವಂತೆ, ದೇವನಾಗರಿ ಲಿಪಿಯಲ್ಲಿರುವ 'ರಾ' ಅಕ್ಷರದ ಪ್ರೇರಣೆಯೊಂದಿಗೆ ₹ ಚಿಹ್ನೆ ವಿನ್ಯಾಸಗೊಂಡಿದೆ. ಇದರ ವಿನ್ಯಾಸಕ್ಕಾಗಿ, ಉದಯ್‌ ಅವರಿಗೆ ಕೇಂದ್ರ ಸರ್ಕಾರವು ₹ 2.50 ಲಕ್ಷ ಬಹುಮಾನ ನೀಡಿತ್ತು.

2010ರಲ್ಲಿ ಡೆಕ್ಕನ್‌ ಹೆರಾಲ್ಡ್‌ಗೆ ಸಂದರ್ಶನ ನೀಡಿದ್ದ ವಿನ್ಯಾಸಕ, 'ಭಾರತದ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವ ಸಲುವಾಗಿ ಚಿಹ್ನೆಯ ಮಧ್ಯದ ಗೆರೆ ಸೇರಿಸಿದ್ದೇನೆ. ಮೇಲಿನ ಗೆರೆಯು ವಿಶಿಷ್ಠವಾಗಿದ್ದು, ದೇವನಾಗರಿ ಲಿಪಿಯು ದೇಶೀಯತೆಯನ್ನು ಪ್ರತಿನಿಧಿಸುತ್ತದೆ' ಎಂದು ಹೇಳಿದ್ದರು. ರೋಮನ್‌ 'ಆರ್‌' ಅಕ್ಷರವನ್ನು ಸೋರಿಸುವ ಪ್ರಯತ್ನವನ್ನೂ ಮಾಡಿದ್ದಾಗಿ ಹೇಳಿಕೊಂಡಿದ್ದರು.

ವಿವಾದಕ್ಕೆ ಉದಯ್‌ ಹೇಳಿದ್ದೇನು?
ತಮಿಳುನಾಡು ಸರ್ಕಾರ ತನ್ನದೇ ಚಿಹ್ನೆ ಬಳಸಿರುವುದರಿಂದ ಸೃಷ್ಟಿಯಾಗಿರುವ ವಿವಾದದ ಕುರಿತು ಉದಯ್‌ ಕುಮಾರ್‌ ಮಾತನಾಡಿದ್ದಾರೆ.

'ಈ ವಿಚಾರದಲ್ಲಿ ನನ್ನ ಪ್ರತಿಕ್ರಿಯೇನಿಲ್ಲ. ಸರ್ಕಾರವು ಇದ್ದಕ್ಕಿದ್ದಂತೆ ಬದಲಾವಣೆ ಬಯಸಿ, ತಮ್ಮದೇ ಲಿಪಿಯನ್ನು ಜಾರಿಗೆ ತಂದಿದೆ. ಇದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಅದರ ಬಗ್ಗೆ ನಾನು ಹೇಳುವಂತೆದ್ದೇನೂ ಇಲ್ಲ' ಎಂದಿದ್ದಾರೆ.

'ನಾನು ಹುಟ್ಟುವ ಮೊದಲೇ ನನ್ನ ತಂದೆ ಶಾಸಕರಾಗಿದ್ದರು. ಈಗ ಅವರಿಗೆ ವಯಸ್ಸಾಗಿದ್ದು, ಹಳ್ಳಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನನ್ನ ತಂದೆಯವರು ಡಿಎಂಕೆಯಿಂದಲೇ ಶಾಸಕರಾಗಿದ್ದರು. ಈಗ ಅದೇ ಪಕ್ಷದವರು ಚಿಹ್ನೆ ಬದಲಿದ್ದಾರೆ. ಇದು ಕಾಕತಾಳೀಯವಷ್ಟೇ. ಬಹುಶಃ, ನಾನು ಬೇರೆಯವನಾಗಿದ್ದರೂ, ಹೀಗೆ ಆಗುತ್ತಿತ್ತೇನೋ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.