ADVERTISEMENT

ದೇಶ ನಿಮ್ಮ ಜತೆಗಿದೆ, ಜನರ ಪ್ರಶ್ನೆಗೆ ಉತ್ತರಿಸಿ: ಪ್ರಧಾನಿಗೆ ವಿರೋಧಪಕ್ಷಗಳ ಆಗ್ರಹ

ಪಿಟಿಐ
Published 18 ಜೂನ್ 2020, 2:44 IST
Last Updated 18 ಜೂನ್ 2020, 2:44 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಭಾರತದ ಭೂಪ್ರದೇಶವನ್ನು ಚೀನೀಯರು ಆಕ್ರಮಿಸಿಕೊಂಡಿದ್ದು ಹೇಗೆ ಮತ್ತು ಭಾರತದ ಯಾವ ಪ್ರದೇಶವನ್ನು ಅವರು ಆಕ್ರಮಿಸಿಕೊಂಡಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು’ ಎಂದು ವಿರೋಧಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ.

‘ಗಡಿಯಲ್ಲಿ ಸೋಮವಾರ ರಾತ್ರಿ 20 ಸೈನಿಕರ ಸಾವಿಗೆ ಕಾರಣವಾದ ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮಾಡಿರುವ ಟ್ವೀಟ್‌ನಲ್ಲಿ ಚೀನಾದ ಹೆಸರನ್ನು ಯಾಕೆ ಪ್ರಸ್ತಾಪಿಸಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಪ್ರಶ್ನಿಸಿದ್ದಾರೆ. ಆ ಮೂಲಕ ಸಚಿವರು ಭಾರತೀಯ ಸೇನೆಯನ್ನು ಅಪಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಹುಲ್‌, ರಕ್ಷಣಾ ಸಚಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ADVERTISEMENT

‘ಘಟನೆಯ ಬಗ್ಗೆ ಟ್ವೀಟ್‌ ಮಾಡಲು ಎರಡು ದಿನಗಳನ್ನು ತೆಗೆದುಕೊಂಡಿದ್ದೇಕೆ, ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದರೆ ಸಚಿವರು ಚುನಾವಣಾ ರ್‍ಯಾಲಿಯಲ್ಲಿ ಭಾಷಣವನ್ನು ಮುಂದುವರಿಸಿದ್ದೇಕೆ, ಘಟನೆಯು ನಿಜವಾಗಿಯೂ ನಿಮಗೆ ನೋವು ಉಂಟುಮಾಡಿದ್ದರೆ ಟ್ವೀಟ್‌ನಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸದೆ ಸೇನೆಯನ್ನು ಅಪಮಾನಿಸಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರವೇ ನೇರವಾಗಿ ಚೀನಾವನ್ನು ನಿಂದಿಸುವ ಬದಲು, ತಾವು ಅವಿತು ಕುಳಿತು, ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೂಲಕ ಚೀನಾದ ಸೇನೆಯನ್ನು ನಿಂದಿಸಿರುವುದರ ಉದ್ದೇಶವೇನು? ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

‘ಭಾರತದ 20 ಸೈನಿಕರ ಹತ್ಯೆ ಯಾಕಾಯಿತು, ಇನ್ನೂ ಯಾರಾದರೂ ಸೈನಿಕರು ಕಾಣೆಯಾಗಿದ್ದಾರೆಯೇ, ಎಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದನ್ನು ತಿಳಿಸಿ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿರುವ ಅವರು, ‘ಪರಿಸ್ಥಿತಿಯ ಬಗ್ಗೆ ತನ್ನ ನಿಲುವೇನು, ಮುಂದಿನ ಹೆಜ್ಜೆಗಳೇನು ಎಂಬುದನ್ನು ಸರ್ಕಾರ ತಿಳಿಸಬೇಕು. ಈ ವಿಚಾರದಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ. ಘಟನೆಗೆ ವಿವಿಧ ವಿವಿಧ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಸರ್ವಪಕ್ಷ ಸಭೆ
ಗಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜೂನ್‌ 19) ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರ ಜತೆ ವರ್ಚುವಲ್‌ ಸಭೆಯನ್ನು ಆಯೋಜಿಸಿದ್ದಾರೆ.

**

ಗಡಿಯಲ್ಲಿ ಏನಾಗಿದೆ ಎಂಬ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು. ಶಾಂತಿ– ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎರಡೂ ಸರ್ಕಾರಗಳು ಹಿಂದೆ ಮಾಡಿಕೊಂಡಿರುವ ಒಪ್ಪಂದವನ್ನು ಗೌರವಿಸಿ, ಉದ್ವಿಗ್ನತೆಯನ್ನು ಶಮನಗೊಳಿಸುವ ಕೆಲಸ ಆರಂಭಿಸಬೇಕು.
– ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

**

‘ಸೈನಿಕರ ಬಲಿದಾನದಿಂದ ದೇಶಕ್ಕೆ ಮತ್ತು ಅವರು ಕುಟುಂಬದವರಿಗೆ ಆಗಿರುವ ನಷ್ಟವನ್ನು ಭರಿಸಲಾಗದು. ಇಂಥ ಸಂಕಷ್ಟದ ಸ್ಥಿತಿಯಲ್ಲಿ ನಾವೆಲ್ಲರೂ ಈ ಮಣ್ಣಿನ ಮಕ್ಕಳ ಬೆಂಬಲಕ್ಕೆ ಇದ್ದೇವೆ.
– ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

**

ಚೀನಾದ ಕಂಪನಿಗಳಿಗೆ ನೀಡಿರುವ ಎಲ್ಲಾ ಗುತ್ತಿಗೆಗಳನ್ನು ರದ್ದು ಮಾಡಬೇಕು, ತಕ್ಷಣದಿಂದ ಜಾರಿಯಾಗುವಂತೆ ಚೀನಾದ ಕಂಪನಿಗಳನ್ನು ಅಮಾನತುಗೊಳಿಸಬೇಕು.
– ಅಖಿಲೆಶ್‌ ಯಾದವ್‌, ಎಸ್‌ಪಿ ಮುಖಂಡ

**
ಪ್ರಧಾನಿಯವರೇ ನೀವು ಧೈರ್ಯವಂತರು, ನಿಮ್ಮ ನೇತೃತ್ವದಲ್ಲಿ ಚೀನಾದ ವಿರುದ್ಧ ಪ್ರತೀಕಾರ ಸಾಧ್ಯವಿದೆ. ಚೀನಾಗೆ ತಕ್ಕ ಪ್ರತ್ಯುತ್ತರ ನೇಡಬೇಕು.
– ಸಂಜಯರ್‌ ರಾವುತ್‌, ಶಿವಸೇನಾ ಮುಖಂಡ

**
ಭಾರತೀಯ ಸೈನಿಕರು ಅಸಾಧಾರಣ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿದ್ದಾರೆ. ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಇಡೀ ದೇಶ, ಹುತಾತ್ಮರಾದ ಸೈನಿಕರ ಕುಟುಂಬದ ಬೆಂಬಲಕ್ಕೆ ಇದೆ.
–ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.