ADVERTISEMENT

ಗುಜರಾತ್ ಮುಖ್ಯಮಂತ್ರಿ ಬದಲಾವಣೆಯ ಅಗತ್ಯ ಏನಿತ್ತು: ಶಿವಸೇನಾ ವ್ಯಂಗ್ಯ

ಪಿಟಿಐ
Published 14 ಸೆಪ್ಟೆಂಬರ್ 2021, 13:13 IST
Last Updated 14 ಸೆಪ್ಟೆಂಬರ್ 2021, 13:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಗುಜರಾತ್‌ ರಾಜ್ಯ ಅಭಿವೃದ್ಧಿ ಪಥದಲ್ಲಿಯೇ ಸಾಗುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿಯನ್ನು ಬದಲಿಸಿ, ಪ್ರಥಮ ಬಾರಿಗೆ ಶಾಸಕರಾಗಿದ್ದ ಭೂಪೇಂದ್ರ ಪಟೇಲ್‌ರನ್ನು ಸಿ.ಎಂ ಆಗಿ ನೇಮಿಸುವ ಔಚಿತ್ಯವೇನಿತ್ತು ಎಂದು ಶಿವಸೇನಾ ಪ್ರಶ್ನಿಸಿದೆ.

ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಕುರಿತು ಬರೆದಿದೆ. ‘ಅಭಿವೃದ್ಧಿ ಮತ್ತು ಆಡಳಿತಕ್ಕಾಗಿ ಬಿಂಬಿಸಲಾಗುತ್ತಿದ್ದ ಗುಜರಾತ್‌ ಮಾದರಿಯ ಬಲೂನು ಈಗ ಸಿಡಿದಿದೆ’ ಎಂದೂ ತರಾಟೆಗೆ ತೆಗೆದುಕೊಂಡಿದೆ.

ವಿಜಯ್‌ ರೂಪಾಣಿ ಮುಖ್ಯಮಂತ್ರಿ ಆಗಿದ್ದಾಗ ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಕುಸಿದಿದ್ದು, ಅಲ್ಲಿನ ಜನರು ಈ ಬಗ್ಗೆ ಆಕ್ರೋಶಗೊಂಡಿದ್ದರು ಎಂದು ಟೀಕಿಸಿದೆ. ಅಲ್ಲದೆ, ಪಟೇಲ್‌ ಪ್ರತಿನಿಧಿಸುವ ಪ್ರಭಾವಿ ಪಾಟಿದಾರ ಸಮುದಾಯವು ಪಕ್ಷದ ಜೊತೆಗೆ ಮುನಿಸಿಕೊಂಡಿದೆ ಎಂಬುದನ್ನು ಬಿಜೆಪಿ ಅರಿತಿತ್ತು ಎಂದು ಟೀಕಿಸಿದೆ.

ADVERTISEMENT

ಇದೇ ಬೆಳವಣಿಗೆಯು ಕಾಂಗ್ರೆಸ್‌ ಪಕ್ಷದಲ್ಲಿ ಆಗಿದ್ದರೆ ಅದನ್ನು ನಾವು ಪ್ರಜಾಪ್ರಭುತ್ವ ಎಂದು ಕರೆಯಬಹುದಿತ್ತು ಎಂದು ಶಿವಸೇನಾ ವ್ಯಂಗ್ಯವಾಗಿ ಹೇಳಿದೆ. ಒಂದು ವೇಳೆ ಗುಜರಾತ್‌ ನಿಜವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ ರಾತ್ರೋರಾತ್ರಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಗತ್ಯವೇನಿತ್ತು ಎಂದು ಖಾರವಾಗಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.