ADVERTISEMENT

ಯೋಧರ ಬಲಿದಾನವನ್ನು ಅವಮಾನಿಸಿದ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ

ಏಜೆನ್ಸೀಸ್
Published 11 ಫೆಬ್ರುವರಿ 2021, 10:51 IST
Last Updated 11 ಫೆಬ್ರುವರಿ 2021, 10:51 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ಗಡಿ ಕಾಯುವ ಯೋಧರ ಬಲಿದಾನವನ್ನು ಕೇಂದ್ರ ಸರ್ಕಾರ ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ಗಡಿಯಲ್ಲಿ ಭಾರತ-ಚೀನಾ ಸೇನೆ ಹಿಂತೆಗೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಸಭೆಯಲ್ಲಿ ನಡೆಸಿದ ಭಾಷಣದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ-ಚೀನಾ ಗಡಿಯಲ್ಲಿ 'ಯಥಾಪೂರ್ವ ಸ್ಥಿತಿ' ಪುನಃಸ್ಥಾಪಿಸದಿದ್ದರೆ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ ಎಂದು ಹೇಳಿದರು.

ADVERTISEMENT

ಗಡಿಯಲ್ಲಿ ಕೇಂದ್ರ ಸರ್ಕಾರವು ನಮ್ಮ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿದೆ ಎಂದು ಗಂಭೀರವಾದ ಆರೋಪ ಮಾಡಿದರು.

ನಮ್ಮ ಪ್ರದೇಶವನ್ನು ಬಿಟ್ಟು ಕೊಡುವ ಮೂಲಕ ಕೇಂದ್ರ ಸರ್ಕಾರವು ನಮ್ಮ ಯೋಧರ ತ್ಯಾಗವನ್ನು ಏಕೆ ಅವಮಾನಿಸುತ್ತಿದ್ದಾರೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಈ ಮೊದಲು ರಾಜ್ಯಸಭೆಗೆ ಮಾಹಿತಿ ನೀಡಿರುವ ರಾಜನಾಥ್ ಸಿಂಗ್, ಪೂರ್ವ ಲಡಾಕ್‌ನ ಪ್ಯಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಲ್ಲಿ ನಿಯೋಜಿಸಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಭಾರತ ಹಾಗೂ ಚೀನಾ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದರು.

ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿಂದ ವಾಸ್ತವನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಸಂಘರ್ಷ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಸೇನೆಯು ಮಿಲಿಟರಿ ಬಲ ವೃದ್ಧಿಸಿದಾಗ ಭಾರತವು ಸೈನ್ಯ ನಿಯೋಜಿಸುವ ಮೂಲಕ ತಕ್ಕ ಉತ್ತರ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.