ADVERTISEMENT

ಹುದ್ದೆಗಳು ಖಾಲಿ; ನೇಮಕಾತಿ ಏಕೆ ನಡೆಯುತ್ತಿಲ್ಲ? ಬಿಜೆಪಿ ವಿರುದ್ಧ ವರುಣ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 13:59 IST
Last Updated 5 ಡಿಸೆಂಬರ್ 2021, 13:59 IST
ವರುಣ್ ಗಾಂಧಿ
ವರುಣ್ ಗಾಂಧಿ   

ಲಖನೌ: ಉತ್ತರ ಪ್ರದೇಶದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಒತ್ತಾಯಿಸಿ ಮೇಣದಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿರುವ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಬೀಸಿರುವ ಪೊಲೀಸ್ ಕ್ರಮವನ್ನು ಬಲವಾಗಿ ಖಂಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಸರ್ಕಾರದಲ್ಲಿ ಹುದ್ದೆಗಳು ಖಾಲಿ ಇರುವಾಗ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆಯ (ಯುಪಿಟಿಇಟಿ) ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿರುವ ವಿಡಿಯೊವನ್ನು ಹಂಚಿಕೊಂಡಿರುವ ವರುಣ್ ಗಾಂಧಿ, ತಮ್ಮದೇ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಇವರೆಲ್ಲರೂ ಭಾರತಾಂಬೆಯ ಮಕ್ಕಳಾಗಿದ್ದಾರೆ. ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು, ಅವರ ಮಾತನ್ನು ಕೇಳಲು ಯಾರೂ ಸಿದ್ಧರಿಲ್ಲ. ಅವರ ಮೇಲೆ ಬರ್ಬರ ಲಾಠಿಚಾರ್ಜ್ ನಡೆದಿದೆ. ನಿಮ್ಮ ಸ್ವಂತ ಮಕ್ಕಳನ್ನು ಅದೇ ರೀತಿ ನಡೆಸಿಕೊಳ್ಳುತ್ತೀರಾ? ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಇದ್ದಾರೆ. ಆದರೂ ನೇಮಕಾತಿ ನಡೆಯುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ನವೆಂಬರ್ 28ರಂದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಲಂಖೀಪರ ಖೇರಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲೂ ತಮ್ಮದೇ ಸರ್ಕಾರದ ನಿಲುವಿನ ವಿರುದ್ಧ ವರುಣ್ ಗಾಂಧಿ ಅಸಮಾಧಾನ ಹೊರ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.