ADVERTISEMENT

ಸಸ್ಯಾಹಾರಿಗಳು ಮಾಂಸಾಹಾರ ಹೋಟೆಲ್‌ಗಳಿಂದ ಆರ್ಡರ್‌ ಮಾಡುವುದೇಕೆ?: ಗ್ರಾಹಕರ ಆಯೋಗ

ಪಿಟಿಐ
Published 8 ಜೂನ್ 2025, 7:36 IST
Last Updated 8 ಜೂನ್ 2025, 7:36 IST
   

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಾದರೆ ಸಸ್ಯಹಾರ ಮಾತ್ರ ಸೇವಿಸುವ ವ್ಯಕ್ತಿಯು ಸಸ್ಯಹಾರ ಮತ್ತು ಮಾಂಸಾಹಾರ ಎರಡನ್ನೂ ಪೂರೈಸುವ ರೆಸ್ಟೋರೆಂಟ್‌ನಿಂದ ಏಕೆ ಆರ್ಡರ್ ಮಾಡಬೇಕು ಎಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಶ್ನಿಸಿದೆ.

‘ವಿವೇಕಿಯಾದವನು ಸಸ್ಯಾಹಾರ ಮತ್ತು ಮಾಂಸಾಹಾರದ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಾನೆ’ ಎಂದು ಮುಂಬೈ ಉಪನಗರ (ಹೆಚ್ಚುವರಿ) ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಳೆದ ತಿಂಗಳು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಸಸ್ಯಾಹಾರದ ಬದಲು ಮಾಂಸಹಾರವನ್ನು ನೀಡಿದ್ದಾರೆ ಎಂದು ಆರೋಪಿಸಿ ‘ವಾವ್ ಮೊಮೊಸ್‌’ ಫಾಸ್ಟ್‌ ಫುಡ್‌ ರೆಸ್ಟೋರೆಂಟ್‌ ಮೇಲೆ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ದೂರನ್ನು ಆಯೋಗ ವಜಾಗೊಳಿಸಿದೆ.

ADVERTISEMENT

‘ದೂರುದಾರರು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿದ್ದರೆ ಮತ್ತು ಮಾಂಸಾಹಾರ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದಾದರೆ, ಫುಡ್ ಆರ್ಡರ್‌ ಮಾಡಲು ಸಸ್ಯಾಹಾರಿ ರೆಸ್ಟೋರೆಂಟ್ ಬದಲು ಮಾಂಸಾಹಾರಿ ಮತ್ತು ಸಸ್ಯಾಹಾರಿ ಎರಡನ್ನೂ ಪೂರೈಸುವ ರೆಸ್ಟೋರೆಂಟ್‌ ಆಯ್ಕೆ ಮಾಡಿಕೊಂಡಿರುವುದೇಕೆ?’ ಎಂದು ಕೇಳಿದೆ.

ದೂರುದಾರರು, 2020ರ ಡಿಸೆಂಬರ್ 19ರಂದು ಮುಂಬೈನ ಸಿಯಾನ್‌ನಲ್ಲಿರುವ ‘ವಾವ್ ಮೊಮೊಸ್’ ಔಟ್‌ಲೆಟ್‌ನಿಂದ 'ಡಾರ್ಜಿಲಿಂಗ್ ಮೊಮೊ ಕಾಂಬೊ' ಅನ್ನು ಆರ್ಡರ್‌ ಮಾಡಿದ್ದರು. ಆರ್ಡರ್ ಮಾಡುವ ವೇಳೆ ‘ವೆಜ್‌’ ಎಂದು ನಿರ್ದಿಷ್ಟವಾಗಿ ಹೇಳಿದ್ದರೂ ಅಲ್ಲಿನ ಸಿಬ್ಬಂದಿ ‘ಚಿಕನ್ ಡಾರ್ಜಿಲಿಂಗ್ ಮೊಮೊಸ್’ ನೀಡಿದ್ದರು ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತಮಗೆ ಮಾನಸಿಕವಾಗಿ ನೋವಾಗಿದ್ದು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ತಮಗೆ ಉಂಟಾದ ನೋವಿಗೆ ಕಂಪನಿಯು(ವಾವ್ ಮೊಮೊಸ್‌) ₹6 ಲಕ್ಷ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದರು.

ದೂರುದಾರರ ಆರೋಪವನ್ನು ನಿರಾಕರಿಸಿರುವ ಕಂಪನಿ, ಇನ್‌ವಾಯ್ಸ್‌ ಅನ್ನು ಸಾಕ್ಷಿಯಾಗಿ ಉಲ್ಲೇಖಿಸಿದೆ. ದೂರುದಾರರು ಮಾಂಸಾಹಾರಿ ಆಹಾರವನ್ನೇ ಆರ್ಡರ್ ಮಾಡಿದ್ದಾರೆ ಎಂದು ವಾದಿಸಿದೆ.

ಎರಡು ಕಡೆಯ ವಾದ ಆಲಿಸಿದ ಆಯೋಗ, ತಮ್ಮ ಆರೋಪಗಳನ್ನು ಸಾಬೀತುಪಡಿಸಲು ದೂರುದಾರರು ವಿಫಲರಾಗಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.