ADVERTISEMENT

ನೀಟ್‌, ಜೆಇಇ ಒತ್ತಾಯದ ಪರೀಕ್ಷೆ ಪ್ರಶ್ನಿಸಿದ ರಾಹುಲ್ ಗಾಂಧಿ

ಏಜೆನ್ಸೀಸ್
Published 28 ಆಗಸ್ಟ್ 2020, 10:28 IST
Last Updated 28 ಆಗಸ್ಟ್ 2020, 10:28 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: 'ಸರ್ಕಾರದ ವೈಫಲ್ಯಗಳಿಗೆ ನೀಟ್ ಮತ್ತು ಜೆಇಇ ಆಕಾಂಕ್ಷಿಗಳ ಹಿತವನ್ನು ಬಲಿಕೊಡಬಾರದು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

'ಪರೀಕ್ಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಎಲ್ಲರ ಅಭಿಪ್ರಾಯ ಆಲಿಸಿ, ಒಮ್ಮತದ ನಿರ್ಧಾರಕ್ಕೆ ಬರಬೇಕು' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ ಸರ್ಕಾರ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಡಿಯೊ ಮೆಸೇಜ್‌ ಒಂದನ್ನು ಪೋಸ್ಟ್ ಮಾಡಿದ್ದಾರೆ.

'ನೀವು ಈ ದೇಶದ ಭವಿಷ್ಯ. ವಿದ್ಯಾರ್ಥಿಗಳು ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ADVERTISEMENT

'ನಿಮ್ಮ ಮೇಲೆ ಹೇರಲಾದ ಯಾವುದೇ ನಿರ್ಧಾರದ ಪರಿಣಾಮಗಳಿಗೆ ನೀವು ಏಕೆ ಹೊಣೆಯಾಗಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಸರ್ಕಾರ ಏನನ್ನಾದರೂ ನಿಮ್ಮ ಮೇಲೆ ಏಕೆ ಹೇರಬೇಕು? ಸರ್ಕಾರ ವಿದ್ಯಾರ್ಥಿಗಳ ಅಭಿಪ್ರಾಯ ಅರಿತುಕೊಳ್ಳಬೇಕು' ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.

ಜಾಯಿಂಟ್ ಎಂಟ್ರೆನ್ಸ್‌ ಎಕ್ಸಾಮ್ (ಜೆಇಇ) ಸೆಪ್ಟೆಂಬರ್ 1ರಿಂದ 6ರವರೆಗೆಮತ್ತುಮತ್ತು ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (ನೀಟ್) ಸೆ 13ರಂದು ನಡೆಯಲಿದೆ. 'ಪರೀಕ್ಷೆಗಳನ್ನು ಮುಂದೂಡಬೇಕು' ಎಂಬ ವಿದ್ಯಾರ್ಥಿಗಳ ಮನವಿಯನ್ನು ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್‌, 'ಬದುಕು ನಿಲ್ಲಿಸಲು ಆಗುವುದಿಲ್ಲ. ವಿದ್ಯಾರ್ಥಿಗಳು ಒಂದಿಡೀ ವರ್ಷ ಹಾಳು ಮಾಡಿಕೊಳ್ಳಲು ಸಿದ್ಧರಿರುವರಾ?' ಎಂದು ಪ್ರಶ್ನಿಸಿತ್ತು.

ಸಾಂಕ್ರಾಮಿಕ ರೋಗ ಮತ್ತು ದೇಶದ ಕೆಲವೆಡೆ ಪ್ರವಾಹದ ಪರಿಸ್ಥಿತಿ ಇರುವುದರಿಂದ ಪರೀಕ್ಷೆಗಳನ್ನು ಮುಂದೂಡಬೇಕು ಎಂದುಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಪರೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ಆರು ರಾಜ್ಯಗಳು ಇಂದು ತೀರ್ಪು ಮರುಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.