ADVERTISEMENT

ರಷ್ಯಾ-ಉಕ್ರೇನ್‌ ಸಂಘರ್ಷ ಮುಂದುವರಿದರೆ ಸೂರ್ಯಕಾಂತಿ ಎಣ್ಣೆ ಮತ್ತಷ್ಟು ದುಬಾರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 2:05 IST
Last Updated 8 ಮಾರ್ಚ್ 2022, 2:05 IST
   

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷವು ಇದೇ ರೀತಿ ಮುಂದುವರಿದಲ್ಲಿ ಸೂರ್ಯಕಾಂತಿ ಎಣ್ಣೆ ದರವು ಲೀಟರಿಗೆ ₹ 195ರಿಂದ ₹ 200ರವರೆಗೂ ಏರಿಕೆ ಆಗುವ ಎಲ್ಲ ಸಾಧ್ಯತೆಗಳು ಇವೆ ಎಂದು ವರ್ತಕರು ಹೇಳಿದ್ದಾರೆ.

ಸೂರ್ಯಕಾಂತಿ ಎಣ್ಣೆ ದರವು ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ ಈಗಾಗಲೇ ₹ 40ರಷ್ಟು ಏರಿಕೆ ಆಗಿದೆ. ಈ ಏರಿಕೆಯು ಚಿಲ್ಲರೆ ಮಾರಾಟ ದರಕ್ಕೆ ವರ್ಗಾವಣೆಆಗಿಲ್ಲ. ಮಾರುಕಟ್ಟೆಯಲ್ಲಿ ಸದ್ಯ ಹಳೆಯ ‘ಎಂಆರ್‌ಪಿ’ ಇರುವ ದಾಸ್ತಾನು ಮಾರಾಟ ಆಗುತ್ತಿದೆ. ಶೀಘ್ರವೇ ಹೊಸ ಎಂಆರ್‌ಪಿ ಬರಲಿದ್ದು, ಆಗ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಬೆಂಗಳೂರಿನ ಯಲಹಂಕದ ಅಡುಗೆ ಎಣ್ಣೆ ವ್ಯಾಪಾರಿ ಕೃಷ್ಣಂ ಶಶಿಧರ್‌ ತಿಳಿಸಿದರು.

ವಿತರಕರ ಬಳಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇರುತ್ತದೆ. ಹೀಗಾಗಿ ತಕ್ಷಣಕ್ಕೆ ದೊಡ್ಡ ಮಟ್ಟದ ಕೊರತೆ ಆಗಲಿಕ್ಕಿಲ್ಲ. ಹೀಗಿದ್ದರೂ ಮಾರುಕಟ್ಟೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗುವುದನ್ನು ತಪ್ಪಿಸಲು ಕಂಪನಿಗಳೇ ವಿತರಕರಿಗೆ ಮಿತಿ ಹೇರುತ್ತಿವೆ. ಇಂತಿಷ್ಟೇ ಮಾರಾಟ ಮಾಡಬೇಕು ಎನ್ನುವ ಗುರಿ ಇಟ್ಟುಕೊಳ್ಳದಂತೆ ವಿತರಕರಿಗೆ ಸೂಚನೆ ನೀಡಿವೆ ಎಂದು ವರ್ತಕರೊಬ್ಬರು ಮಾಹಿತಿ ನೀಡಿದರು.

ADVERTISEMENT

ಸೂರ್ಯಕಾಂತಿ ಎಣ್ಣೆಯ ಬೆಲೆ ಹೆಚ್ಚಳ ಆಗಿದ್ದರೂ ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಕೊರತೆ ಕಂಡುಬಂದಿಲ್ಲ. ಆದರೆ, ರಷ್ಯಾ–ಉಕ್ರೇನ್‌ ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆ ಲಭ್ಯತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಬೆಂಗಳೂರಿನಲ್ಲಿ ಖಾದ್ಯತೈಲದ ಸಗಟು ಮತ್ತು ರಿಟೇಲ್‌ ಮಾರಾಟ ನಡೆಸುತ್ತಿರುವ ವರ್ತಕರೊಬ್ಬರು ಹೇಳಿದರು.

ಆಮದುದಾರರು, ದೊಡ್ಡ ಕಂಪನಿಗಳ ಮಟ್ಟದಲ್ಲಿ ಸೂರ್ಯಕಾಂತಿ ಎಣ್ಣೆಯ ಕೊರತೆ ಉಂಟಾಗಿದೆ. ಹೀಗಿದ್ದರೂ ಪೂರೈಕೆ ಸಂಪೂರ್ಣವಾಗಿ ನಿಂತಿಲ್ಲ. ಮೊದಲು 50 ಟನ್‌ ಸಿಗುತ್ತಿತ್ತು. ಈಗ 10 ಟನ್‌ಗಳಿಂದ 15 ಟನ್‌ಗಳಷ್ಟಾದರೂ ಸಿಗುತ್ತಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.