ADVERTISEMENT

ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಅಮಿತ್ ಶಾ ಏಕೆ ಮೌನವಾಗಿದ್ದರು: ಮಮತಾ ಬ್ಯಾನರ್ಜಿ

ಪಿಟಿಐ
Published 30 ಮಾರ್ಚ್ 2021, 2:30 IST
Last Updated 30 ಮಾರ್ಚ್ 2021, 2:30 IST
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ನಂದಿಗ್ರಾಮ (ಪಶ್ಚಿಮ ಬಂಗಾಳ): ಟಿಎಂಸಿ ಬೆಂಬಲಿಗರಿಂದ ಹಲ್ಲೆಗೊಳಗಾದ ಪಕ್ಷದ ಕಾರ್ಯಕರ್ತೆಯೊಬ್ಬರ 82 ವರ್ಷದ ತಾಯಿ ಶೋವಾ ಮಜುಂದಾರ್ ಅವರ ನಿಧನವನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಿರುಗೇಟು ನೀಡಿದ್ದಾರೆ. ಬಿಜೆಪಿ ಆಡಳಿತದ ಉತ್ತರಪ್ರದೇಶದ ಹತ್ರಾಸ್‌ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರು ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಾನು ಬೆಂಬಲಿಸುವುದಿಲ್ಲ ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ಮಜುಂದಾರ್ ಸಾವಿನ ಹಿಂದಿನ ನಿಜವಾದ ಕಾರಣದ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾರೆ.

ಫೆಬ್ರವರಿಯಲ್ಲಿ ಉತ್ತರ 24 ಪರಗಣ ಜಿಲ್ಲೆಯ ನಿಮ್ಟಾದಲ್ಲಿ ವೃದ್ಧ ಮಹಿಳೆ ಟಿಎಂಸಿ ಬೆಂಬಲಿಗರ ದಾಳಿಯ ಸಂದರ್ಭದಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. ಅದೇ ದಿನ ಆಕೆಯ ಮಗನನ್ನು ಥಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ADVERTISEMENT

'ಆ ಸಹೋದರಿ ಹೇಗೆ ನಿಧನರಾದರೆಂದು ನನಗೆ ಗೊತ್ತಿಲ್ಲ. ನಾವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಬೆಂಬಲಿಸುವುದಿಲ್ಲ. ನನ್ನ ಸಹೋದರಿಯರು ಮತ್ತು ತಾಯಂದಿರ ಮೇಲಿನ ಹಿಂಸಾಚಾರವನ್ನು ನಾವು ಎಂದಿಗೂ ಬೆಂಬಲಿಸಲಿಲ್ಲ. ಆದರೆ ಬಿಜೆಪಿ ಈಗ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ' ಎಂದು ಮಮತಾ ಆರೋಪಿಸಿದ್ದಾರೆ.

'ಅಮಿತ್ ಶಾ ಅವರು 'ಬಂಗಾಳ ಕಾ ಕ್ಯಾ ಹಾಲ್ ಹೈನ್' ಎಂದು ಟ್ವೀಟ್ ಮಾಡುತ್ತಿದ್ದಾರೆ ಮತ್ತು ಹೇಳುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ ನಡೆದಾಗ ಅವರೇಕೆ ಮೌನವಹಿಸಿದ್ದರು?' ಎಂದು ನಂದಿಗ್ರಾಮದಲ್ಲಿ ನಡೆದ ರ‍್ಯಾಲಿ ವೇಳೆ ಮಮತಾ ಪ್ರಶ್ನಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಈಗ ಮಾದರಿ ನೀತಿ ಸಂಹಿತೆಯೊಂದಿಗೆ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿದೆ ಎಂದ ಬ್ಯಾನರ್ಜಿ, 'ಕಳೆದ ಕೆಲವು ದಿನಗಳಲ್ಲಿ ಮೂರು ಟಿಎಂಸಿ ಕಾರ್ಮಿಕರು ಕೊಲ್ಲಲ್ಪಟ್ಟಿದ್ದಾರೆ' ಎಂದಿದ್ದಾರೆ.

ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಲಾಗಿದ್ದ ಮಹಿಳೆಯ ಸಾವಿಗೆ ಸಂತಾಪ ಸೂಚಿಸಿದ ಗೃಹ ಸಚಿವರು, ಮಜುಂದಾರ್ ಅವರ ಕುಟುಂಬದ ನೋವು ಮತ್ತು ದುಃಖ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ದೀರ್ಘಕಾಲ ಕಾಡುತ್ತದೆ. ಹಿಂಸಾಚಾರ ರಹಿತ ನಾಳೆಗಾಗಿ ಬಂಗಾಳ ಹೋರಾಡಲಿದೆ, ಬಂಗಾಳ ನಮ್ಮ ಸಹೋದರಿಯರು ಮತ್ತು ತಾಯಂದಿರಿಗಾಗಿ ಸುರಕ್ಷಿತ ರಾಜ್ಯಕ್ಕಾಗಿ ಹೋರಾಡಲಿದೆ' ಎಂದು ಹೇಳಿದ್ದರು.

ಏಪ್ರಿಲ್ 1 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ನಂದಿಗ್ರಾಮದಲ್ಲಿ ಮತದಾನ ನಡೆಯಲಿದ್ದು, ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.