ADVERTISEMENT

ದಾಂಪತ್ಯ ಕಲಹ: ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದ ಪತ್ನಿ; ಖಾರದಪುಡಿ ಹಾಕಿ ವಿಕೃತಿ

ಪಿಟಿಐ
Published 8 ಅಕ್ಟೋಬರ್ 2025, 14:33 IST
Last Updated 8 ಅಕ್ಟೋಬರ್ 2025, 14:33 IST
-
-   

ನವದೆಹಲಿ: ಗಾಢನಿದ್ರೆಯಲ್ಲಿದ್ದ ಪತಿಯ ಮೇಲೆ ಕುದಿಯುತ್ತಿದ್ದ ಎಣ್ಣೆ ಸುರಿದ ಪತ್ನಿ, ಸುಟ್ಟಗಾಯಗಳ ಮೇಲೆ ಖಾರದ ಪುಡಿ ಹಾಕಿದ ವಿಲಕ್ಷಣ ಘಟನೆ ದೆಹಲಿಯ ಮದನಗಿರ ಪ್ರದೇಶದಲ್ಲಿ ನಡೆದಿದೆ.

ಸುಡುವ ಎಣ್ಣೆ ಸುರಿದಿದ್ದರಿಂದಾಗಿ ಗಾಯಗೊಂಡಿರುವ 28 ವರ್ಷದ ದಿನೇಶ್‌ ಅವರನ್ನು ಸಫ್ದರಜಂಗ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ದಿನೇಶ್‌ ಅವರ ಹೇಳಿಕೆ ಆಧರಿಸಿ ಅಂಬೇಡ್ಕರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ: ದಿನೇಶ್, ಫಾರ್ಮಾಸ್ಯುಟಿಕಲ್‌ ಕಂಪನಿಯೊಂದರ ಉದ್ಯೋಗಿ. ಅಕ್ಟೋಬರ್‌ 2ರಂದು ಕೆಲಸ ಮುಗಿಸಿ ಮನೆಗೆ ಮರಳಿದ್ದ ಅವರು, ಊಟ ಮುಗಿಸಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. 

ADVERTISEMENT

‘ಪತ್ನಿ ಹಾಗೂ ಮಗಳು ಕೂಡ ಹತ್ತಿರದಲ್ಲಿಯೇ ಮಲಗಿದ್ದರು. ನಸುಕಿನ 3.15ರ ಸುಮಾರಿಗೆ ಹಠಾತ್ತನೇ ಮೈಯಲ್ಲಿ ತೀವ್ರ ಸುಟ್ಟಗಾಯಗಳಿಂದಾಗಿ ನೋವು ಕಾಣಿಸಿಕೊಂಡಿತು. ಕಣ್ತೆರೆದು ನೋಡಿದಾಗ, ಎದುರಿನಲ್ಲಿ ನಿಂತಿದ್ದ ಪತ್ನಿ ನನ್ನ ದೇಹ ಹಾಗೂ ಮುಖದ ಮೇಲೆ ಕುದಿಯುತ್ತಿದ್ದ ಎಣ್ಣೆ ಸುರಿಯುತ್ತಿದ್ದಳು’ ಎಂದು ದಿನೇಶ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘ನೋವು ಸಹಿಸಲಾಗದೆ ನಾನು ಎದ್ದು, ಸಹಾಯಕ್ಕಾಗಿ ಕೂಗಲು ಯತ್ನಿಸಿದೆ. ಅದಕ್ಕೆ ಅವಕಾಶ ಕೊಡದ ಪತ್ನಿ, ಮೈಮೇಲಿನ ಸುಟ್ಟಗಾಯಗಳ ಮೇಲೆ ಖಾರದ ಪುಡಿಯನ್ನು ಸಿಂಪಡಿಸಿದಳು. ಇದಕ್ಕೆ ನಾನು ಪ್ರತಿರೋಧ ಒಡ್ಡಲು ಮುಂದಾದೆ. ಆಗ, ಚೀರಾಟ ನಡೆಸಿದರೆ ನಿನ್ನ ಮೇಲೆ ಮತ್ತಷ್ಟು ಸುಡುವ ಎಣ್ಣೆ ಸುರಿಯುತ್ತೇನೆ ಎಂಬುದಾಗಿ ಪತ್ನಿ ಹೇಳಿದಳು’ ಎಂದು ದಿನೇಶ್‌ ಆರೋಪಿಸಿದ್ದಾರೆ.

ನೋವು ಸಹಿಸಲಾಗದೇ, ದಿನೇಶ್‌ ಅವರು ಜೋರಾಗಿ ಕೂಗಿದ್ದಾರೆ. ಚೀರಾಟ ಕೇಳಿದ ನೆರೆಹೊರೆಯವರು ಹಾಗೂ ಮನೆ ಮಾಲೀಕರ ಕುಟುಂಬದವರು ದಿನೇಶ್‌ ಮನೆಯತ್ತ ದೌಡಾಯಿಸಿದ್ದಾರೆ.

ನಂತರ, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎದೆ, ಮುಖ ಹಾಗೂ ತೋಳುಗಳಲ್ಲಿನ ಗಾಯಗಳ ತೀವ್ರತೆಯನ್ನು ನೋಡಿದ ವೈದ್ಯರ ಶಿಫಾರಸಿನಂತೆ, ಅವರನ್ನು ಸಫ್ದರಜಂಗ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ದಿನೇಶ್‌ ಅವರ ದೇಹದಲ್ಲಾಗಿರುವ ಗಾಯಗಳು ‘ಅಪಾಯಕಾರಿ’ ಮಟ್ಟದ್ದಾಗಿವೆ ಎಂಬುದಾಗಿ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧದಲ್ಲಿ ಒಡಕು..ಸಂಧಾನ ವಿಫಲ

‘ನಮ್ಮ ಮದುವೆಯಾಗಿ ಎಂಟು ವರ್ಷಗಳಾಗಿವೆ. ಎರಡು ವರ್ಷಗಳ ಹಿಂದೆ ದಾಂಪತ್ಯದಲ್ಲಿ ಒಡಕು ಮೂಡಿತ್ತು. ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ಪತ್ನಿ ‘ಮಹಿಳೆಯರ ವಿರುದ್ಧ ಅಪರಾಧ (ಸಿಎಡಬ್ಲು) ಘಟಕದಲ್ಲಿ ನನ್ನ ವಿರುದ್ಧ ದೂರು ದಾಖಲಿಸಿದ್ದಳು. ನಂತರ ಸಂಧಾನ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿತ್ತು’ ಎಂದು ದಿನೇಶ್‌ ವಿವರಿಸಿದ್ದಾರೆ. ದಿನೇಶ್ ಪತ್ನಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 118(ಅಪಾಯಕಾರಿ ಆಯುಧಗಳಿಂದ ಗಂಭೀರ ಸ್ವರೂಪದ ಗಾಯಗಳನ್ನು ಮಾಡುವುದು) 124(ಆ್ಯಸಿಡ್‌ ಎರಚಿ ಗಂಭೀರ ಗಾಯ ಮಾಡುವುದು) ಹಾಗೂ 326(ಬೆಂಕಿ ಅಥವಾ ಸ್ಫೋಟಕ ವಸ್ತು ಬಳಸಿ ಗಾಯ ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- ‘ಒದ್ದಾಡುತ್ತಿದ್ದ ಪತಿ..ಅಡಗಿದ್ದ ಪತ್ನಿ..’

‘ದಿನೇಶ್‌ ಅವರ ಚೀರಾಟ ಕೇಳಿದ ತಕ್ಷಣ ನನ್ನ ತಂದೆ ಮೇಲಿನ ಮಹಡಿಯಲ್ಲಿದ್ದ ಅವರ ಮನೆಗೆ ಹೋದರು. ದಿನೇಶ್‌ ಪತ್ನಿ ಒಳಗಿನಿಂದ ಬಾಗಿಲಿಗೆ ಬೀಗ ಹಾಕಿದ್ದರು. ಹಲವು ಬಾರಿ ಮನವಿ ಬಳಿಕ ಆಕೆ ಬಾಗಿಲು ತೆರೆದರು’ ಎಂದು ದಿನೇಶ್‌ ಅವರ ಮನೆಯ ಮಾಲೀಕನ ಮಗಳು ಅಂಜಲಿ ವಿವರಿಸಿದರು. ‘ಬಾಗಿಲು ತೆಗೆದು ಒಳಗೆ ನೋಡಿದಾಗ ದಿನೇಶ್‌ ಅವರು ನೋವಿನಿಂದ ಒದ್ದಾಡುತ್ತಿದ್ದರು. ಅವರ ಪತ್ನಿ ಕೋಣೆಯೊಂದರಲ್ಲಿ ಅಡಗಿದ್ದರು. ನನ್ನ ತಂದೆ ಮಧ್ಯಪ್ರವೇಶಿಸಲು ಮುಂದಾದಾಗ ಆಕೆ ಅವಕಾಶ ನೀಡಲಿಲ್ಲ. ಪತಿಯನ್ನು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು’ ಎಂದು ವಿವರಿಸಿದರು. ‘ಪತಿಯೊಂದಿಗೆ ಮನೆಯಿಂದ ಹೊರಗೆ ಬಂದಾಗ ಆಕೆಯ ವರ್ತನೆ ವಿಚಿತ್ರವಾಗಿತ್ತು. ಆಕೆ ವಿರುದ್ಧ ದಿಕ್ಕಿನಲ್ಲಿ ನಡೆಯಲು ಆರಂಭಿಸಿದಾಗ ನಮಗೆ ಅನುಮಾನ ಬಂತು. ನನ್ನ ತಂದೆ ಆಕೆಯನ್ನು ತಡೆದರು. ತಕ್ಷಣವೇ ಆಟೊವೊಂದರಲ್ಲಿ ದಿನೇಶ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು’ ಎಂದೂ ಅಂಜಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.