ADVERTISEMENT

ಸಂಭಲ್ ಹಿಂಸಾಚಾರ: ವಿಕಿಪೀಡಿಯ ವಿರುದ್ಧ ಅಮಿತ್ ಮಾಳವೀಯಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2024, 10:18 IST
Last Updated 3 ಡಿಸೆಂಬರ್ 2024, 10:18 IST
<div class="paragraphs"><p>ಅಮಿತ್‌ ಮಾಳವೀಯಾ </p></div>

ಅಮಿತ್‌ ಮಾಳವೀಯಾ

   

ನವದೆಹಲಿ: ಸಂಭಲ್ ಹಿಂಸಾಚಾರದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ವಿಕಿಪೀಡಿಯವು ಕೋಮು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯಾ ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘2024ರ ಸಂಭಲ್ ಹಿಂಸಾಚಾರಕ್ಕೆ ‘ಜೈ ಶ್ರೀರಾಮ್‌’ ಘೋಷಣೆ ಕಾರಣ ಎಂದು ವಿಕಿಪೀಡಿಯ ಹೇಳಿದೆ. ಆದರೆ, ಮಸೀದಿ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ತಂಡ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಯಾವುದೇ ಘೋಷಣೆಗಳಾಗಲಿ, ಕೋಮು ಪ್ರಚೋದಕ ಹೇಳಿಕೆಗಳಾಗಲಿ, ವಿಜಯೋತ್ಸವವಾಗಲಿ ಇಲ್ಲದಿರುವುದು ವಿಡಿಯೊದಲ್ಲಿ ಕಾಣಬಹುದು. ಭಾರತವನ್ನು ಭಸ್ಮ ಮಾಡಲು ವಿಕಿಪೀಡಿಯಾವು ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ

ADVERTISEMENT

ಮಸೀದಿಯಲ್ಲಿ ಸಮೀಕ್ಷೆ ನಡೆಸುತ್ತಿರುವ ವೇಳೆ ನ್ಯಾಯಾಲಯ ನೇಮಿಸಿದ ತಂಡದ ಜೊತೆಯಲ್ಲಿದ್ದ ಕೆಲವರು ಮುಸ್ಲಿಮರನ್ನು ಪ್ರಚೋದಿಸಲು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದರು ಎಂಬ ಪ್ರತಿಪಕ್ಷದ ಸಂಸದರ ಆರೋಪಗಳನ್ನು ಉಲ್ಲೇಖಿಸಿ ವಿಕಿಪೀಡಿಯ ವರದಿ ಮಾಡಿದೆ.

ಏನಿದು ವಿವಾದ?

ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು, ಮೊಘಲ್‌ ದೊರೆ ಬಾಬರ್‌ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್‌ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು.

ನವೆಂಬರ್ 24ರಂದು ಮಸೀದಿ ಸಮೀಕ್ಷೆ ನಡೆಸಲು ಬಂದ ತಂಡವು ತನ್ನ ಕಾರ್ಯ ಆರಂಭಿಸುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ಜನರು ಘೋಷಣೆಗಳನ್ನು ಕೂಗಿದ್ದರು. ನಂತರ ಅದು ಘರ್ಷಣೆಗೆ ತಿರುಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.