ಆಗ್ರಾ (ಉತ್ತರ ಪ್ರದೇಶ): ಆಗ್ರಾ ನಗರವನ್ನು ಪ್ರಾಚೀನ ಕಾಲದಲ್ಲಿ ಯಾವುದಾದರೂ ಹೆಸರಿನಿಂದ ಕರೆಯಲಾಗುತ್ತಿತ್ತೇ ಎಂದು ತಿಳಿಯುವ ಸಲುವಾಗಿ ಇಲ್ಲಿನ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸಮಿತಿಯೊಂದನ್ನು ರಚಿಸಿದೆ. ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಆಗ್ರಾ ನಗರದ ಹೆಸರನ್ನು ಬದಲಿಸಲಿದೆ ಎಂಬ ವದಂತಿಗಳಿಗೆ ಈ ವಿದ್ಯಮಾನ ಪುಷ್ಟಿ ನೀಡಿದೆ.
ಆದರೆ ಈ ಬಗ್ಗೆ ರಾಜಧಾನಿ ಲಖೌನಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ಪುರಾತನ ಹೆಸರಿಗಾಗಿ ಶೋಧ ನಡೆಯಲಿದೆ. ಸಮಿತಿಯಲ್ಲಿ ವಿಭಾಗದ ಮುಖ್ಯಸ್ಥ ಸುಗಮ್ ಆನಂದ್, ಸ್ಥಳೀಯ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದಾರೆ. ಪುರಾತನ ಹೆಸರು ಇದ್ದ ಬಗ್ಗೆ ಪುರಾವೆ ಒದಗಿಸಲು ಸಾರ್ವಜನಿಕರನ್ನೂ ಕೋರಲಾಗಿದೆ.
ಹಳೆಯ ಹೆಸರು ಪತ್ತೆಹಚ್ಚುವ ಸಂಬಂಧ ಸ್ಥಳೀಯಾಡಳಿತದಿಂದ ಪತ್ರ ಬಂದಿದೆ ಎಂದು ಕುಲಪತಿ ಅರವಿಂದ ದೀಕ್ಷಿತ್ ಸೋಮವಾರ ತಿಳಿಸಿದ್ದಾರೆ. ಆಗ್ರಾದ ಹೆಸರು ಬದಲಿಸುವಂತೆ ಕೆಲವು ನಿವಾಸಿಗಳು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಆಗ್ರಾ ನಗರಾಡಳಿತಕ್ಕೆ ಈ ಬಗ್ಗೆ ಪ್ರಸ್ತಾವ ಕಳುಹಿಸಲಾಗಿತ್ತು. ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಪತ್ರ ಬಂದಿದೆ ಎಂದು ಅವರು ವಿವರಿಸಿದ್ದಾರೆ.
ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು, ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದೂ ಇತ್ತೀಚೆಗೆ ಮರುನಾಮಕರಣ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.