ADVERTISEMENT

ರಾಜ್ಯದಲ್ಲಿರುವ ಪ್ರತಿ ಕುಟುಂಬದ ಕನಿಷ್ಠ ಓರ್ವನಿಗೆ ಉದ್ಯೋಗ: ಯೋಗಿ ಆದಿತ್ಯನಾಥ್‌

ಪಿಟಿಐ
Published 3 ಆಗಸ್ಟ್ 2022, 13:31 IST
Last Updated 3 ಆಗಸ್ಟ್ 2022, 13:31 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಗೋರಾಖ್‌ಪುರ: ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಕನಿಷ್ಠ ಓರ್ವನಿಗೆ ಉದ್ಯೋಗ ಕಲ್ಪಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭರವಸೆ ನೀಡಿದ್ದಾರೆ. ಇದಕ್ಕಾಗಿ ಕೌಶಲ್ಯ ಗುರುತಿಸುವ ಸಮೀಕ್ಷೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಗೋರಖ್‌ಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಯೋಗಿ ಆದಿತ್ಯನಾಥ್‌, 'ಕೌಶಲ್ಯ ಗುರುತಿಸುವ ಸಮೀಕ್ಷೆ ವೇಳೆ ಕುಟುಂಬ ಸದಸ್ಯರ ಪೈಕಿ ಯಾರೊಬ್ಬರೂ ಉದ್ಯೋಗದಲ್ಲಿ ಇಲ್ಲ ಎಂಬುದನ್ನು ದೃಢೀಕರಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಂತಹ ಕುಟುಂಬ ಸದಸ್ಯರನ್ನು ವಿಶೇಷ ಕಾರ್ಯಕ್ರಮದಡಿ ಸೇರ್ಪಡೆಗೊಳಿಸಲಾಗುತ್ತದೆ ಮತ್ತು ಕುಟುಂಬದ ಕನಿಷ್ಠ ಓರ್ವನಿಗೆ ಉದ್ಯೋಗ ಕಲ್ಪಿಸಲಾಗುತ್ತದೆ' ಎಂದಿದ್ದಾರೆ.

'ಅಗತ್ಯಕ್ಕೆ ತಕ್ಕಂತೆ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ನೌಕರಿಗೆ ಅಥವಾ ಸ್ವಯಂ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವಂತೆ ಮಾಡಲಾಗುತ್ತದೆ. ರಾಜ್ಯದ ಯಾವುದೇ ಒಂದು ಕುಟುಂಬವು ನಿರುದ್ಯೋಗದ ಸಮಸ್ಯೆ ಎದುರಿಸಬಾರದು' ಎಂದು ಆದಿತ್ಯನಾಥ್‌ ವಿವರಿಸಿದ್ದಾರೆ.

ADVERTISEMENT

ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಡಬಲ್‌ ಇಂಜಿನ್‌ ಸರ್ಕಾರವು ಸ್ಕಿಲ್‌ ಇಂಡಿಯಾ ಮತ್ತು ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಕ್ರಮಗಳ ಮೂಲಕ ನೌಕರರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ 5 ಲಕ್ಷ ಯುವಕರಿಗೆ ರಾಜ್ಯ ಸರ್ಕಾರ ಉದ್ಯೋಗ ಕಲ್ಪಿಸಿದೆ. 60 ಲಕ್ಷ ಕುಶಲಕರ್ಮಿಗಳಿಗೆ ಸಾಲ ನೀಡಿದೆ. 2015-16ರಲ್ಲಿ ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಶೇಕಡಾ 18ಕ್ಕಿಂತ ಹೆಚ್ಚು ಇತ್ತು. ಇದೀಗ ಶೇಕಡಾ 16ರಷ್ಟು ಇಳಿಕೆಯಾಗಿದೆ. ಪ್ರಸ್ತುತ ನಿರುದ್ಯೋಗ ಪ್ರಮಾಣವು ಶೇಕಡಾ 2.7ರಷ್ಟಿದೆ ಎಂದಿದ್ದಾರೆ.

ನರೇಂದ್ರ ಮೋದಿ ಅವರ 5 ಟ್ರಿಲಿಯನ್‌ ಆರ್ಥಿಕತೆಯ ಕನಸನ್ನು ಸಾಕಾರಗೊಳಿಸಲು ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್‌ ಡಾಲರ್‌ಗೆ ಏರಿಸುವ ಗುರಿಯನ್ನು ಹೊಂದಿದ್ದೇವೆ. 2016ರಲ್ಲಿ ಉತ್ತರ ಪ್ರದೇಶದ ಆರ್ಥಿಕತೆಯು ರಾಷ್ಟ್ರದ 6ನೇ ಸ್ಥಾನದಲ್ಲಿತ್ತು. ಇದೀಗ 2ನೇ ಸ್ಥಾನಕ್ಕೆ ಏರಿದೆ. ಕಳೆದ 5 ವರ್ಷಗಳಲ್ಲಿ ಆದಾಯ ಮತ್ತು ಜಿಡಿಪಿ ದುಪ್ಪಟ್ಟಾಗಿದೆ. ಯುವಕರು, ಕುಶಲಕರ್ಮಿಗಳು ಮತ್ತು ನೌಕರರು ಸ್ವಯಂ-ಅವಲಂಬಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.