ADVERTISEMENT

ಸಂವಿಧಾನ ಬಡವರ 'ರಕ್ಷಣಾ ಗುರಾಣಿ' | ಅದರ ಮೇಲಿನ ದಾಳಿಗೆ ಅವಕಾಶ ನೀಡಲ್ಲ: ರಾಹುಲ್

ಪಿಟಿಐ
Published 26 ನವೆಂಬರ್ 2025, 5:39 IST
Last Updated 26 ನವೆಂಬರ್ 2025, 5:39 IST
   

ನವದೆಹಲಿ: ಭಾರತದ ಸಂವಿಧಾನ ಬಡವರ 'ರಕ್ಷಣಾ ಗುರಾಣಿ' ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದರ ಮೇಲೆ ಯಾವುದೇ ದಾಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ದೇಶದ ಜನರನ್ನು ಒತ್ತಾಯಿಸಿದ್ದಾರೆ. ಜತೆಗೆ ಅಂತಹ ಯಾವುದೇ ದಾಳಿಯ ವಿರುದ್ಧ ಎದ್ದು ನಿಲ್ಲುವ ಮೊದಲಿಗ ನಾನೇ ಎಂದು ಹೇಳಿದ್ದಾರೆ.

ಸಂವಿಧಾನ ದಿನದಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಭಾರತದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಇದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೀಡಿದ ಪವಿತ್ರ ವಾಗ್ದಾನವಾಗಿದೆ. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಾಗಿರಲಿ, ಯಾವುದೇ ಪ್ರದೇಶದಿಂದ ಬಂದವರಾಗಿರಲಿ, ಯಾವುದೇ ಭಾಷೆಯನ್ನು ಮಾತನಾಡುವವರಾಗಿರಲಿ, ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲರಿಗೂ ಸಮಾನತೆ, ಗೌರವ ಮತ್ತು ನ್ಯಾಯ ಸಿಗುತ್ತದೆ ಎಂಬ ಭರವಸೆ. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ' ಎಂದಿದ್ದಾರೆ.

ಸಂವಿಧಾನವು ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ಪ್ರತಿಯೊಬ್ಬ ನಾಗರಿಕನ ರಕ್ಷಣಾ ಗುರಾಣಿ. ಅಲ್ಲದೇ ಅದು ಆ ಜನರ ಶಕ್ತಿ ಮತ್ತು ಧ್ವನಿಯಾಗಿದೆ ಎಂದೂ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಜಾತ್ಯತೀತತೆ, ಸಮಾಜವಾದವನ್ನು ರಕ್ಷಿಸುವ ಅಗತ್ಯವಿದೆ–ಖರ್ಗೆ

ಸಂವಿಧಾನದ ಮೂಲಭೂತ ತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಜಾತ್ಯತೀತತೆ ಮತ್ತು ಸಮಾಜವಾದವನ್ನು ರಕ್ಷಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

'ಸಂವಿಧಾನವು ವಕೀಲರಿಗೆ ಕೇವಲ ಒಂದು ದಾಖಲೆಯಲ್ಲ, ಬದಲಾಗಿ ಅದು ಜೀವನ ವಿಧಾನ' ಎಂಬ ಡಾ. ಬಿ.ಆರ್‌ ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ದೇಶದ ಏಕತೆ ಮತ್ತು ಸಮಗ್ರತೆಗಾಗಿ, ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯಕ್ಕಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಾವು ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ ಎಂದಿದ್ದಾರೆ.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್‌ ಅವರು 1949ರ ನವೆಂಬರ್‌ 26ರಂದು ಸಂವಿಧಾನವನ್ನು ಅಂಗೀಕರಿಸುವ ನಿರ್ಣಯವನ್ನು ಮಂಡಿಸಿದ್ದರು. ಸಂವಿಧಾನವನ್ನು ಸಭೆಯು ಅಂಗೀಕರಿಸಿದ ಇದೇ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.