ADVERTISEMENT

ಜಮ್ಮು–ಕಾಶ್ಮೀರ | ರಾಜ್ಯ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹ: ಒಮರ್‌ ಅಬ್ದುಲ್ಲಾ

ಪಿಟಿಐ
Published 15 ಆಗಸ್ಟ್ 2025, 13:37 IST
Last Updated 15 ಆಗಸ್ಟ್ 2025, 13:37 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ಭಯೋತ್ಪಾದಕ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಭವಿಷ್ಯದೊಂದಿಗೆ ಸಂಬಂಧ ಕಲ್ಪಿಸುವ ಪರಿಪಾಟವನ್ನು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಟೀಕಿಸಿದ್ದಾರೆ.

ಶುಕ್ರವಾರ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಅವರು, ‘ಭಯೋತ್ಪಾದನೆಯ ಮೂಲಕ ಈ ರೀತಿಯ ಪ್ರಭಾವ ಬೀರಲು ಪಾಕಿಸ್ತಾನಕ್ಕೆ ಅವಕಾಶ ಕಲ್ಪಿಸುವುದಿಲ್ಲ’ ಎಂದು ಪ್ರತಿಪಾದಿಸಿದರು. 

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಾಗ ಈಚೆಗಿನ ಪಹಲ್ಗಾಮ್ ಘಟನೆ ಸೇರಿದಂತೆ ವಸ್ತುಸ್ಥಿತಿಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿತ್ತು. ಇದರ ಬೆನ್ನಲ್ಲೇ ಒಮರ್‌ ಅಬ್ದುಲ್ಲಾ ಪ್ರತಿಕ್ರಿಯೆ ಹೊರಬಿದ್ದಿದೆ.

ADVERTISEMENT

‘ನಾವು (ಜಮ್ಮು ಮತ್ತು ಕಾಶ್ಮೀರ) ಒಂದು ರಾಜ್ಯವಾಗಬೇಕೆ ಎನ್ನುವುದನ್ನು ಪಹಲ್ಗಾಮ್‌ನ ಹಂತಕರು ಮತ್ತು ನೆರೆಯ ದೇಶದಲ್ಲಿರುವ ಅವರ ಮುಖಂಡರು ತೀರ್ಮಾನಿಸುತ್ತಾರಾ’ ಎಂದು ಅವರು ಪ್ರಶ್ನಿಸಿದ್ದಾರೆ.  

‘ಪ್ರತಿ ಬಾರಿ ನಾವು ರಾಜ್ಯ ಸ್ಥಾನಮಾನ ಮರುಸ್ಥಾಪನೆಗೆ ಹತ್ತಿರವಾದಾಗಲೆಲ್ಲ, ಅದನ್ನು ನಾಶಪಡಿಸಲು ಉಗ್ರರು ಪ್ರಯತ್ನಿಸುತ್ತಾರೆ. ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ’ ಎಂದು ವಿಷಾದಿಸಿದರು. 

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ಇಳಿಸಿದ ನಂತರ, ಒಮರ್‌ ಅಬ್ದುಲ್ಲಾ ಮಾಡುತ್ತಿರುವ ಮೊದಲ ಭಾಷಣ ಇದಾಗಿದೆ. ‘ಸುಪ್ರೀಂ ಕೋರ್ಟ್‌ ನಮಗೆ  8 ವಾರ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ  90 ವಿಧಾನಸಭಾ ಕ್ಷೇತ್ರಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು’ ಎಂದು ಅವರು  ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.