ADVERTISEMENT

2024ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ: ಪಂಕಜಾ ಮುಂಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2022, 14:11 IST
Last Updated 5 ಅಕ್ಟೋಬರ್ 2022, 14:11 IST
ಅಮಿತ್ ಶಾ ಅವರೊಂದಿಗೆ ಮಾಜಿ ಸಚಿವೆ ಪಂಕಜಾ ಮುಂಡೆ
ಅಮಿತ್ ಶಾ ಅವರೊಂದಿಗೆ ಮಾಜಿ ಸಚಿವೆ ಪಂಕಜಾ ಮುಂಡೆ    

ಮುಂಬೈ: 2024ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಹೈಕಮಾಂಡ್‌ ಅಥವಾ ಯಾವುದೇ ಹುದ್ದೆಯನ್ನು ಪಡೆಯದಿರುವ ಬಗ್ಗೆ ಅಸಮಾಧಾನ ಹೊಂದಿಲ್ಲ. ಪಾರ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ’ ಎಂದು ಹೇಳಿದ್ದಾರೆ.

‘ಹೋರಾಟ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸಹ ಹೋರಾಡಬೇಕಾಯಿತು. ದಿವಂಗತ ಗೋಪಿನಾಥ್ ಮುಂಡೆ ಅವರು ತಮ್ಮ ಇಡೀ ರಾಜಕೀಯ ಜೀವನದುದ್ದಕ್ಕೂ ಹೋರಾಡಬೇಕಾಯಿತು. ಅವರು ಕೇವಲ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದರು’ ಎಂದು ಹೇಳಿದ್ದಾರೆ.

ADVERTISEMENT

‘ತಮ್ಮ ನಾಯಕ ಅಥವಾ ನಾಯಕಿಗೆ ಯಾವುದಾದರೂ ಹುದ್ದೆ ಸಿಗಬೇಕು ಎಂದು ಜನರು (ಮತದಾರರು) ಭಾವಿಸುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು 2019ರ ವಿಧಾನಸಭೆ ಚುನಾವಣೆ ಬಳಿಕ ಯಾವುದೇ ಹುದ್ದೆ ಹೊಂದಿಲ್ಲ. ಆದರೆ, ನಾನು ಅಸಮಾಧಾನಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಮಾಜಿ ಸಚಿವೆ ಪಂಕಜಾ ಮುಂಡೆ ಅವರ ಹೆಸರನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು.

2019ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷಗಿರಿಯ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಪಂಕಜಾ ಅವರು ಪಕ್ಷದಲ್ಲಿ ಕಡೆಗಣೆನೆಗೆ ಒಳಗಾದ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಪಕ್ಷದ ವಿರುದ್ಧ ಬಂಡಾಯ ಏಳುವ ಸೂಚನೆಗಳನ್ನು ಪರೋಕ್ಷವಾಗಿ ನೀಡಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಾರ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಕಜಾ ಅವರು ತಮ್ಮ ಸೋದರ ಸಂಬಂಧಿ ಮತ್ತು ಎನ್‌ಸಿಪಿ ನಾಯಕ ಧನಂಜಯ್‌ ಮುಂಡೆ ವಿರುದ್ಧ ಸೋತಿದ್ದರು. ಪಂಕಜಾ ಅವರು 2014 ರಿಂದ 2019ರವರೆಗೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.