ADVERTISEMENT

ಆನ್‌ಲೈನ್‌ನಲ್ಲಿ ಮತಗಟ್ಟೆವಾರು ಮಾಹಿತಿ ಪ್ರಕಟಿಸಲು ಚರ್ಚೆಗೆ ಸಿದ್ಧ: SCಗೆ ಆಯೋಗ

ಪಿಟಿಐ
Published 18 ಮಾರ್ಚ್ 2025, 9:38 IST
Last Updated 18 ಮಾರ್ಚ್ 2025, 9:38 IST
   

ನವದೆಹಲಿ: ಮತಗಟ್ಟೆವಾರು ಮತದಾನ ಪ್ರಮಾಣವನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಕೇಳಿಬಂದಿರುವ ಒತ್ತಾಯದ ಕುರಿತು ಚರ್ಚಿಸಲು ಸಿದ್ಧ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ತಮ್ಮ ಬೇಡಿಕೆಯನ್ನು ಹತ್ತು ದಿನಗಳ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ನಿರ್ದೇಶಿಸಿದೆ.

ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ ಸಂಸ್ಥೆಯು 2019ರಲ್ಲಿ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫಲಿತಾಂಶ ಪ್ರಕಟವಾದ 48 ಗಂಟೆಗಳ ಒಳಗಾಗಿ ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತಗಟ್ಟೆವಾರು ಮತ ಹಂಚಿಕೆಯ ಮಾಹಿತಿಯನ್ನು ಪ್ರಕಟಿಸುವ ಕುರಿತು ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ADVERTISEMENT

ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಆಯೋಗದ ಪರ ವಾದ ಮಂಡಿಸಿ, ‘ಭಾರತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಖುದ್ದು ಭೇಟಿಯಾಗಿ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಅನ್ನು ಕೋರಿದರು.

‘ಆಯೋಗಕ್ಕೆ ಹೊಸ ಆಯುಕ್ತರ ನೇಮಕವಾಗಿದೆ. ಅರ್ಜಿದಾರರು ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆ ಸಲ್ಲಿಸಬಹುದು’ ಎಂದರು.

‘ಅರ್ಜಿದಾರರಾದ ಸಂಸದೆ ಮಹುವಾ ಮತ್ತು ಎನ್‌ಜಿಒಗಳು ಚುನಾವಣಾ ಆಯೋಗ ಮತ್ತು ಆಯುಕ್ತರಿಗೆ ತಮ್ಮ ಬೇಡಿಕೆ ಕುರಿತು ಅರ್ಜಿಯನ್ನು ಸಲ್ಲಿಸಲಿ. ಅದನ್ನು ಗಣನೆಗೆ ತೆಗೆದುಕೊಂಡು ದಿನಾಂಕ ನಿಗದಿಪಡಿಸಲಾಗುವುದು. ವಿಚಾರಣಾ ದಿನಾಂಕದ ಕುರಿತು ಮುಂಚೆಯೇ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು. ಹತ್ತು ದಿನಗಳ ಒಳಗಾಗಿ ಮನವಿ ಸಲ್ಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ನಿರ್ದೇಶಿಸಿದರು.

ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಯಿತು. 

ಎನ್‌ಜಿಒ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಚುನಾವಣಾ ಆಯೋಗವು, ಸಲ್ಲಿಕೆಯಾದ ಅರ್ಜಿಯು ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಇಡೀ ವ್ಯವಸ್ಥೆಯಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡುವಂತಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.