ADVERTISEMENT

ಜನಪರ ವಿಷಯಗಳ ಚರ್ಚೆಯಾಗಲಿ: ಮೋದಿ ಮನವಿ

ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭ

ಪಿಟಿಐ
Published 11 ಡಿಸೆಂಬರ್ 2018, 18:16 IST
Last Updated 11 ಡಿಸೆಂಬರ್ 2018, 18:16 IST
ಮೋದಿ
ಮೋದಿ   

ನವದೆಹಲಿ: ‘ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗಿಂತ ಜನಪರ ಕಾಳಜಿ ಇರುವ ಸಂಗತಿಗಳ ಬಗ್ಗೆ ಚರ್ಚಿಸಲು ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಬಳಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜಕೀಯ ಪಕ್ಷಗಳಿಗೆ ಮಂಗಳವಾರ ಮನವಿ ಮಾಡಿದರು.

ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್‌ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ‘ಜನರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ಅಂತಹ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಳ್ಳಬೇಕು’ ಎಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದರು.

‘ಸಂಸತ್‌ನ ಚಳಿಗಾಲದ ಅಧಿವೇಶನಕ್ಕೆ ತನ್ನದೇ ಆದ ಮಹತ್ವ ಇದೆ. ಹೀಗಾಗಿ ಪ್ರತಿಯೊಬ್ಬರೂ ಇಲ್ಲಿ ನಡೆಯುವ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಮೋದಿ ಮನವಿ ಮಾಡಿದರು.

ADVERTISEMENT

‘ಚರ್ಚೆ, ಸಮಾಲೋಚನೆ ಹಾಗೂ ಮಾತುಕತೆಯನ್ನು ಒಳಗೊಂಡ ರಚನಾತ್ಮಕ ಅಧಿವೇಶನ ಇದಾಗಲಿದೆ ಎಂಬ ಭರವಸೆ ಇದೆ. ಈ ಅಧಿವೇಶನ ನಿಗದಿ ಪಡಿಸಿದ ಅವಧಿಗಿಂತ ಹೆಚ್ಚು ದಿನ ನಡೆಯಲಿ ಎಂಬ ಆಶಯ ನನ್ನದು’ ಎಂದೂ ಅವರು ಹೇಳಿದರು.ಚಳಿಗಾಲದ ಅಧಿವೇಶನ ಜ.8ರ ವರೆಗೆ ನಡೆಯಲಿದೆ.

ಕಲಾಪ ಮುಂದಕ್ಕೆ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಇತ್ತೀಚೆಗೆ ನಿಧನರಾದ ಹಾಲಿ ಮತ್ತು ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಂಸತ್‌ನ ಉಭಯ ಸದನಗಳ ಕಲಾಪ ಮುಂದೂಡಲಾಯಿತು.

ಮಾಜಿ ಪ್ರಧಾನಿ ವಾಜಪೇಯಿ, ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ, ಕೇಂದ್ರ ಸಚಿವ ಎಚ್‌.ಎನ್‌.ಅನಂತಕುಮಾರ್‌ ಹಾಗೂ ಮೂವರು ಹಾಲಿ ಸಚಿವರ ನಿಧನಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ವಾಜಪೇಯಿ, ಚಟರ್ಜಿ ಹಾಗೂ ಇತರ ಸದಸ್ಯರ ಕೊಡುಗೆಗಳನ್ನು ಸ್ಮರಿಸಿದರು.

ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಗದ್ಗದಿತರಾದರು.

ಒಡಿಶಾ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಗಾಜಾ ಚಂಡಮಾರುತಕ್ಕೆ ಬಲಿಯಾದವರಿಗೆ ಸಹ ರಾಜ್ಯಸಭೆಯಲ್ಲಿ ಗೌರವ ಸಲ್ಲಿಸಲಾಯಿತು.

ಲೋಕಸಭೆಯಲ್ಲಿ ಕಲಾಪ ಆರಂಭಕ್ಕೂ ಮುನ್ನ ವಿರೋಧ ಪಕ್ಷಗಳ ನಾಯಕರು ಕುಳಿತಿದ್ದ ಸ್ಥಾನಗಳತ್ತ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಎಸ್‌ಪಿ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಹಾಗೂ ಇತರರೊಂದಿಗೆ ಮಾತುಕತೆ ನಡೆಸಿದರು.

‘ಅನಂತ’ ನೆನಪು: ವೆಂಕಯ್ಯ ಭಾವೋದ್ವೇಗ

ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌.ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಭಾವೋದ್ವೇಗಕ್ಕೆ ಒಳಗಾದರಲ್ಲದೇ, ಉಮ್ಮಳಿಸಿ ಬಂದ ದುಃಖವನ್ನು ನಿಯಂತ್ರಿಸಿದ ಘಟನೆ ನಡೆಯಿತು.

ಮಂಗಳವಾರ ಆರಂಭಗೊಂಡ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅವರು ಸಂತಾಪ ಸೂಚಿಸಿ ಮಾತನಾಡಲು ಆರಂಭಿಸಿದಾಗ ಮಾತು ಹೊರಡದೇ ಗದ್ಗದಿತರಾದರು. ತೀವ್ರ ಭಾವೋದ್ವೇಗಕ್ಕೆ ಒಳಗಾದ ಅವರಿಂದ ಮಾತು ಹೊರಡಲಿಲ್ಲ. ತಕ್ಷಣವೇ ಸಾವರಿಸಿಕೊಂಡ ಅವರು, ‘ನಾನು ನನ್ನ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡಿದ್ದೇನೆ’ ಎಂದು ದುಃಖಿಸಿದರು.

‘ಅನಂತಕುಮಾರ ಒಬ್ಬ ಉತ್ಸಾಹ ತುಂಬಿದ್ದ ವ್ಯಕ್ತಿಯಾಗಿದ್ದರು. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು’ ಎಂದೂ ಸ್ಮರಿಸಿದರು. ಸಂತಾಪ ಸೂಚಕ ನುಡಿಗಳನ್ನಾಡುವ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗಿದ್ದಕ್ಕೆ ಕ್ಷಮೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.