ADVERTISEMENT

ಚಿದಂಬರಂ, ಫಾರೂಕ್‌ ಅಬ್ದುಲ್ಲಾ ಸಂಸತ್ತಿಗೆ ಬರಲಿ: ವಿಪಕ್ಷಗಳ ಒತ್ತಾಯ

ಚಳಿಗಾಲದ ಅಧಿವೇಶನದ ಮುನ್ನಾ ದಿನ ಸರ್ವಪಕ್ಷ ಸಭೆಯಲ್ಲಿ ವಿಪಕ್ಷ ಆಗ್ರಹ

ಪಿಟಿಐ
Published 17 ನವೆಂಬರ್ 2019, 18:54 IST
Last Updated 17 ನವೆಂಬರ್ 2019, 18:54 IST
ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಲು ಬಂದ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ಮೋದಿ ಮತ್ತು ರಾಜ್ಯ ಖಾತೆಯ ಸಚಿವ ಅರ್ಜುನ್‌ ರಾಮ್ ಮೇಘವಾಲ್ ಪಿಟಿಐ ಚಿತ್ರ
ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಲು ಬಂದ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ಮೋದಿ ಮತ್ತು ರಾಜ್ಯ ಖಾತೆಯ ಸಚಿವ ಅರ್ಜುನ್‌ ರಾಮ್ ಮೇಘವಾಲ್ ಪಿಟಿಐ ಚಿತ್ರ   

ನವದೆಹಲಿ: ನ.18ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ರೈತರ ಸಂಕಷ್ಟ ಮುಂತಾದ ವಿಚಾರಗಳು ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ಲೋಕಸಭಾ ಸದಸ್ಯ ಫಾರೂಕ್‌ ಅಬ್ದುಲ್ಲಾ ಮತ್ತು ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಜೈಲಿನಲ್ಲಿರುವ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರು ಅಧಿವೇಶನದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು ಎಂದು ಅಧಿವೇಶನದ ಮುನ್ನಾದಿನ, ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳು ಆಗ್ರಹಿಸಿವೆ.

ಚರ್ಚೆ ನಡೆಸುವುದೇ ಸಂಸತ್ತಿನ ಅತ್ಯಂತ ಮುಖ್ಯ ಕೆಲಸ ಎಂದು ಪ್ರಧಾನಿ ಹೇಳಿದ್ದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 27 ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

ADVERTISEMENT

ಸದನದ ನಿಯಮಗಳು ಮತ್ತು ಪ್ರಕ್ರಿಯೆಗಳಿಗೆ ಅನುಗುಣವಾಗಿ ಎಲ್ಲ ವಿಚಾರಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ. ಕಳೆದ ಅಧಿವೇಶನದ ಹಾಗೆಯೇ ಈ ಅಧಿವೇಶನವೂ ಫಲಪ್ರದವಾಗಿ ನಡೆಯಬೇಕು. ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆ ನಡೆದರೆ ಅಧಿಕಾರಶಾಹಿ ಜಾಗೃತವಾಗಿರುತ್ತದೆ ಎಂದು ಪ್ರಧಾನಿ ಹೇಳಿದ್ದಾಗಿ ಜೋಶಿ ತಿಳಿಸಿದ್ದಾರೆ.

ಫಾರೂಕ್‌ ಅಬ್ದುಲ್ಲಾ ಅವರು ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬ ವಿರೋಧ ಪಕ್ಷ
ಗಳ ಬೇಡಿಕೆಗೆ ಸರ್ಕಾರದಿಂದ ಭರವಸೆ ಸಿಕ್ಕಿಲ್ಲ. ಅವರು ಅಧಿವೇಶನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸುವುದು ಸರ್ಕಾರದ ಸಾಂವಿಧಾನಿಕ ಬದ್ಧತೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಸಂಸದ ಹಸನೈನ್‌ ಮಸೂದಿ ಹೇಳಿದ್ದಾರೆ.

‘ಸಂಸದರೊಬ್ಬರನ್ನು ಕಾನೂನುಬಾಹಿರವಾಗಿ ವಶದಲ್ಲಿ ಇರಿಸಿಕೊಳ್ಳುವುದು ಹೇಗೆ ಸಾಧ್ಯ’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಪ್ರಶ್ನಿಸಿದ್ದಾರೆ.

ವಿಪಕ್ಷ ಸಾಲಿನಲ್ಲಿ ಶಿವಸೇನಾ

ಸಂಸತ್ತಿನ ಉಭಯ ಸದನಗಳಲ್ಲಿಯೂ ಶಿವಸೇನಾ ಸದಸ್ಯರಿಗೆ ವಿರೋಧ ಪಕ್ಷಗಳ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಶಿವಸೇನಾದ ಅರವಿಂದ ಸಾವಂತ್‌ ಅವರು ತಮ್ಮ ಹುದ್ದೆಗೆ ಕಳೆದ ಸೋಮವಾರ ರಾಜೀನಾಮೆ ನೀಡಿದ್ದಾರೆ. ಸಂಸತ್‌ ಅಧಿವೇಶನದ ಮುನ್ನಾದಿನ ನಡೆದ ಎನ್‌ಡಿಎ ಘಟಕ ಪಕ್ಷಗಳ ಸಭೆಯಲ್ಲಿಯೂ ಶಿವಸೇನಾ ಭಾಗವಹಿಸಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯು ಸಮಾನವಾಗಿ ಹಂಚಿಕೆ ಆಗಬೇಕು ಎಂದು ಸೇನಾ ಪಟ್ಟು ಹಿಡಿದ ಕಾರಣ ಬಿಜೆಪಿ ಜತೆಗೆ ಆ ಪಕ್ಷದ ಸಂಬಂಧ ಹಳಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.