ADVERTISEMENT

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಬೆಂಗಳೂರು ವಲಯ 2ನೇ ಸ್ಥಾನದಲ್ಲಿ

ಶೇ 99.96ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 11:02 IST
Last Updated 3 ಆಗಸ್ಟ್ 2021, 11:02 IST
ಸಿಬಿಎಸ್‌ಇ ಲಾಂಛನ
ಸಿಬಿಎಸ್‌ಇ ಲಾಂಛನ   

ನವದೆಹಲಿ: 10ನೇ ತರಗತಿ ಪರೀಕ್ಷೆ ಫಲಿತಾಂಶವನ್ನುಸಿಬಿಎಸ್‌ಇ ಮಂಗಳವಾರ ಪ್ರಕಟಿಸಿದ್ದು, ಶೇ 99.96ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಬೆಂಗಳೂರು ವಲಯ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ.

ಶೇ 99.99ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ತಿರುವನಂತಪುರ ವಲಯ ಮೊದಲ ಸ್ಥಾನದಲ್ಲಿದ್ದರೆ, ಶೇ 99.94ರಷ್ಟು ಫಲಿತಾಂಶದೊಂದಿಗೆ ಚೆನ್ನೈ ವಲಯ ಮೂರನೇ ಸ್ಥಾನದಲ್ಲಿದೆ.

20,97,128 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇವರ ಪೈಕಿ ಶೇ 99.04ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16,639 ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

ADVERTISEMENT

57,824 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಶೇ 90ರಿಂದ 95ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ 2,00,962.ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದೂ ಸಿಬಿಎಸ್‌ಇ ತಿಳಿಸಿದೆ.

ಸಿಬಿಎಸ್‌ಇ ಸಂಲಗ್ನತೆ ಹೊಂದಿದ, ವಿದೇಶಗಳಲ್ಲಿರುವ ಶಾಲೆಗಳ ಫಲಿತಾಂಶ ಶೇ 99.92ರಷ್ಟಿದೆ.

ಕೋವಿಡ್‌–19 ಪಿಡುಗಿನ ಕಾರಣ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಪಡಿಸಿತ್ತು. ಪರ್ಯಾಯ ಮೌಲ್ಯಮಾಪನ ಪದ್ಧತಿ ಅನುಸಾರ ಈಗ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಜವಾಹರ ನವೋದಯ ವಿದ್ಯಾಲಯಗಳ ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ. ಕಳೆದ ವರ್ಷ ಶೇ 98.66ರಷ್ಟಿದ್ದ ಫಲಿತಾಂಶ ಈ ವರ್ಷ ಶೇ 99.99ರಷ್ಟಾಗಿದೆ. ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಕ್ರಮವಾಗಿ ಶೇ 96.03 ಹಾಗೂ ಶೇ 95.88 ರಷ್ಟಿದೆ ಎಂದು ಸಿಬಿಎಸ್‌ಇ ತಿಳಿಸಿದೆ.

ಖಾಸಗಿ ಶಾಲೆಗಳ ಫಲಿತಾಂಶ ಶೇ 99.57ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶದಲ್ಲಿ ಶೇ 6.76ರಷ್ಟು ಹೆಚ್ಚಳ ಕಂಡುಬಂದಿದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.