ADVERTISEMENT

'ಬೇಗ ಗುಣಮುಖರಾಗಿ': ಕಪಿಲ್ ಸಿಬಲ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಪಿಟಿಐ
Published 29 ಸೆಪ್ಟೆಂಬರ್ 2021, 17:21 IST
Last Updated 29 ಸೆಪ್ಟೆಂಬರ್ 2021, 17:21 IST
ಕಪಿಲ್ ಸಿಬಲ್: ಪಿಟಿಐ ಚಿತ್ರ
ಕಪಿಲ್ ಸಿಬಲ್: ಪಿಟಿಐ ಚಿತ್ರ   

ನವದೆಹಲಿ: ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ಪ್ರಶ್ನಿಸಿದ್ದ ಕೆಲವೇ ಗಂಟೆಗಳ ಬಳಿಕ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ಧಾರೆ.

ಹಲವು ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆಯುತ್ತಿರುವ ಮತ್ತು ಪಂಜಾಬ್ ಕಾಂಗ್ರೆಸ್ ಘಟಕದ ಬಿಕ್ಕಟ್ಟು ಹಿನ್ನೆಲೆಯಲ್ಲಿ ತಕ್ಷಣವೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಬೇಕೆಂದು ಸಿಬಲ್ ಒತ್ತಾಯಿಸಿದ್ದರು. ಪೂರ್ಣ ಪ್ರಮಾಣದ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಪಕ್ಷದಲ್ಲಿ ಬದಲಾವಣೆಗೆ ಒತ್ತಾಯಿಸಿದ್ದ 23 ಮಂದಿಯ ತಂಡದಲ್ಲಿದ್ದ ಸಿಬಲ್, ಪತ್ರಿಕಾಗೋಷ್ಠಿಯಲ್ಲಿ ಈ ಗುಂಪು ‘ಜೀ ಹುಜೂರ್ 23 ಅಲ್ಲ’ ನಿರಂತರವಾಗಿ ನಮ್ಮ ಅಭಿಪ್ರಾಯಗಳನ್ನು ಪಕ್ಷದ ಮುಂದಿಡುತ್ತೇವೆ. ಬೇಡಿಕೆಗಳನ್ನು ಪುನರಾವರ್ತಿಸುತ್ತೇವೆ ಎಂದಿದ್ದರು.

ADVERTISEMENT

ಸಿಬಲ್ ಹೇಳಿಕೆಯಿಂದ ಸಿಡಿದೆದ್ದಿರುವ ದೆಹಲಿ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು, ‘ಬೇಗ ಗುಣಮುಖರಾಗಿ’ ಎಂಬ ಫಲಕಗಳನ್ನು ಹಿಡಿದು ಜೋರ್ ಬಾಗ್‌ನಲ್ಲಿರುವ ಕಪಿಲ್ ಸಿಬಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಪಿಲ್ ಸಿಬಲ್ ಮಾತುಗಳು ನಮಗೆ ಅತೀವ ನೋವುಂಟುಮಾಡಿವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಸಿಬಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ‘ಕೂಡಲೇ ಪಕ್ಷವನ್ನು ತೊರೆಯಿರಿ’ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ‘ಲಾಭ ಪಡೆದ’ನಾಯಕತ್ವವನ್ನೇ ಸಿಬಲ್ ಪ್ರಶ್ನಿಸುತ್ತಿರುವುದು ಸರಿಯಲ್ಲ ಎಂದು ಹಲವು ನಾಯಕರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.