ADVERTISEMENT

ಉ.ಪ್ರದೇಶದಿಂದ ಓಡಿಸಲ್ಪಟ್ಟ ದುಷ್ಕರ್ಮಿಗಳು ಉತ್ತರಾಖಂಡದಲ್ಲಿ ನೆಲೆಸುತ್ತಾರೆ: ಯೋಗಿ

ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಸಿಎಂ ಯೋಗಿ ಆದಿತ್ಯನಾಥ

ಪಿಟಿಐ
Published 12 ಫೆಬ್ರುವರಿ 2022, 11:01 IST
Last Updated 12 ಫೆಬ್ರುವರಿ 2022, 11:01 IST
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ   

ಹೊಸ ಟಿಹರಿ: ಪ್ರಸಕ್ತ ಚುನಾವಣೆಯಲ್ಲಿ ಉತ್ತರಾಖಂಡದ ಮತದಾರರು ಯಾವುದೇ ತಪ್ಪನ್ನು ಮಾಡಬಾರದು. ಚಿಕ್ಕದಾಗಿ ಎಡವಿದರೂ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದ್ದಾರೆ.

ಟಿಹರಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ ಶನಿವಾರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

'ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಇರದಿದ್ದರೆ ಉತ್ತರ ಪ್ರದೇಶದಿಂದ ಓಡಿಸಲ್ಪಟ್ಟ ದುಷ್ಕರ್ಮಿಗಳೆಲ್ಲರೂ ರಾಜ್ಯದಲ್ಲಿ ನೆಲೆಸುತ್ತಾರೆ. ಇಲ್ಲಿನ ಜನತೆಗೆ ತೊಂದರೆ ನೀಡುತ್ತಾರೆ' ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ADVERTISEMENT

ಉತ್ತರಾಖಂಡವು ಕೇವಲ ನನ್ನ ಹುಟ್ಟಿದ ಸ್ಥಳವಲ್ಲ, ಗಡಿ ರಾಜ್ಯವೂ ಹೌದು. ಅಪರಾಧದ ವಿರುದ್ಧ ಸಹಿಷ್ಣುತೆ ತೋರದೆ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಉತ್ತರ ಪ್ರದೇಶವು ಅತ್ಯಂತ ಸುರಕ್ಷಿತ ರಾಜ್ಯವಾಗಿ ಬದಲಾಗಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ ಎಂದು ಆದಿತ್ಯನಾಥ ಭರವಸೆ ವ್ಯಕ್ತಪಡಿಸಿದರು.

'ಮತದಾರರ ಕಡೆಯಿಂದ ಸಣ್ಣ ತಪ್ಪಾದರೂ ಅದು ನಿಮಗೇ ಸಮಸ್ಯೆಯನ್ನು ತಂದೊಡ್ಡಲಿದೆ. ಉತ್ತರ ಪ್ರದೇಶದಿಂದ ಓಡಿಸಲ್ಪಡುವ ದುಷ್ಕರ್ಮಿಗಳೆಲ್ಲರೂ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಡಿ ಎಂದು ಆದಿತ್ಯನಾಥ ತಿಳಿಸಿದ್ದಾರೆ.

ಉತ್ತರಾಖಂಡದಂತಹ 'ರಾಷ್ಟ್ರದ ಭದ್ರತೆಯ ಅಭೇದ್ಯ ಕೋಟೆ'ಯಲ್ಲಿ ಒಡಕು ಮೂಡಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಆರೋಪಿಸಿದ ಆದಿತ್ಯನಾಥ, ಮುಸ್ಲಿಂ ವಿಶ್ವವಿದ್ಯಾಲಯ ನಿರ್ಮಿಸುವ ಕಾಂಗ್ರೆಸ್‌ ವಿಚಾರವನ್ನು ಟೀಕಿಸಿದರು. ಪಕ್ಷಕ್ಕೆ ನಾಯಕರಿಲ್ಲ ಎಂದರು.

ನಾವು ಹಿಂದೂಗಳು ಎಂದು ಹೆಮ್ಮೆ ಪಡುವುದನ್ನು ಸ್ವಾಮಿ ವಿವೇಕಾನಂದರು ನಮಗೆ ತಿಳಿಸಿಕೊಟ್ಟಿದ್ದಾರೆ. ರಾಹುಲ್‌ ಗಾಂಧಿ ಅವರ ಪೂರ್ವಜರು ತಮ್ಮನ್ನು ತಾವು ಆಕಸ್ಮಿಕ ಹಿಂದೂಗಳು ಎಂದು ಕರೆದುಕೊಂಡಿದ್ದರು. ಆದರೆ ಇದೀಗ ರಾಹುಲ್‌ ಹಿಂದೂಯಿಸಂ ಎಂದರೇನು ಎಂಬುದನ್ನು ಮತ್ತೆ ವಿವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.