ADVERTISEMENT

ತ್ರಿವಳಿ ತಲಾಖ್‌ಗೆ ನಿರಾಕರಣೆ: ಪತ್ನಿಯನ್ನೇ ಸುಟ್ಟ ಪತಿ

ಮಗಳ ಎದುರೇ ತಾಯಿಗೆ ಬೆಂಕಿ

ಪಿಟಿಐ
Published 19 ಆಗಸ್ಟ್ 2019, 20:10 IST
Last Updated 19 ಆಗಸ್ಟ್ 2019, 20:10 IST
   

ಶ್ರಾವಸ್ತಿ: ತ್ರಿವಳಿ ತಲಾಖ್‌ಗೆ ನಿರಾಕರಿಸಿದ ಹೆಂಡತಿಯನ್ನು ಗಂಡ ಮತ್ತು ಆತನ ತಂದೆ–ತಾಯಿ ಸಾಯುವ ತನಕ ಹೊಡೆದು ಬೆಂಕಿ ಹಚ್ಚಿ ಸುಟ್ಟುಹಾಕಿದ ಘಟನೆ ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದೆ.

ಭಾರತ–ನೇಪಾಳ ಗಡಿಯ ಗಾದ್ರಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮೃತಳ ಗಂಡ ಮತ್ತು ಆಕೆಯ ಅತ್ತೆ–ಮಾವನನ್ನು ಸೋಮವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಗಾದ್ರಾ ಗ್ರಾಮದ ನಿವಾಸಿಗಳಾದ ಸಯೀದಾ ಮತ್ತು ನಫೀಸ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದು, ನಫೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾನೆ.

ADVERTISEMENT

‘ಆಗಸ್ಟ್ 6ರಂದು ನಫೀಸ್ ಫೋನಿನ ಮೂಲಕ ಪತ್ನಿ ಸಯೀದಾಗೆ ತ್ರಿವಳಿ ತಲಾಖ್ ಹೇಳಿದ್ದ. ಆದರೆ, ಇದನ್ನು ಸಯೀದಾ ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ತಮ್ಮ ಮಗಳನ್ನು ಅಳಿಯ ಮತ್ತು ಆತನ ಅಪ್ಪ–ಅಮ್ಮ ಸಾಯುವ ತನಕ ಹೊಡೆದು, ನಂತರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ’ ಎಂದು ಸಯೀದಾಳ ತಂದೆ ರಂಜಾನ್ ಆರೋಪಿಸಿದ್ದಾರೆ.

‘ಈದ್ ಹಬ್ಬಕ್ಕಾಗಿ ಹೆಂಡತಿಯ ಮನೆಗೆ ನಫೀಸ್ ಬಂದಿದ್ದ. ಆಗ ದಂಪತಿಗಳಿಬ್ಬರಿಗೂ ರಾಜಿ ಮಾಡಿಸಲಾಗಿತ್ತು. ನಫೀಸ್, ಸಯೀದಾಳನ್ನು ಮನೆಗೆ ಕರೆದೊಯ್ದಿದ್ದ. ಆದರೆ, ನಫೀಸ್ ಮತ್ತು ಆತನ ಮನೆಯವರು ಸಯೀದಾಳ ಮೇಲೆ ಹಲ್ಲೆ ನಡೆಸಿ, ಆಕೆಯ ಆರು ವರ್ಷದ ಮಗಳ ಎದುರಿಗೇ ಸಯೀದಾಳ ದೇಹಕ್ಕೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾರೆ’ಎಂದು ರಂಜಾನ್ ದೂರಿದ್ದಾರೆ.

‘ಸಯೀದಾ ಕುಟುಂಬದ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಫೀಸ್, ಆತನ ತಂದೆ–ತಾಯಿ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ತಲಾಖ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ತನಿಖೆ ಪ್ರಗತಿಯಲ್ಲಿದ್ದು, ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಕಾನೂನಿನಪ್ರಕಾರ ತ್ರಿವಳಿ ತಲಾಖೆ ಅಪರಾಧ ಎಂದು ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.