ADVERTISEMENT

ಮಗುವಿನ ಹೊಟ್ಟೆ ಉಬ್ಬರ ಸಮಸ್ಯೆಗೆ ಕಾದ ಕಬ್ಬಿಣದ ಸರಳಿಂದ ಬರೆ ಹಾಕಿದ ಮಹಿಳೆ ವಶಕ್ಕೆ

ಪಿಟಿಐ
Published 6 ಜುಲೈ 2025, 12:57 IST
Last Updated 6 ಜುಲೈ 2025, 12:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಾಗ್ಪುರ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 10 ದಿನಗಳ ಹೆಣ್ಣು ಮಗುವಿನ ಹೊಟ್ಟೆ ಉಬ್ಬರಕ್ಕೆ ಚಿಕಿತ್ಸೆ ಎಂದು ಕಾದ ಕಬ್ಬಿಣದ ರಾಡ್‌ನಿಂದ ಬರೆ ಹಾಕಿದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶುಕ್ರವಾರ ಈ ವಿಷಯ ಬೆಳಕಿಗೆ ಬಂದ ನಂತರ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಹಾರಾಷ್ಟ್ರ ಮಾನವ ಬಲಿದಾನ ಮತ್ತು ಇತರ ಅಮಾನವೀಯ, ದುಷ್ಟ, ಅಘೋರಿ ಪದ್ಧತಿಗಳು, ಮಾಟಮಂತ್ರಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆಯ ಸೆಕ್ಷನ್ 118 (1) (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ನೋವು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಜೂನ್ 15ರಂದು ಅಮರಾವತಿ ಜಿಲ್ಲೆಯ ಚಿಕಲ್ದಾರಾದ ದಹೇಂದ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಜನಿಸಿತ್ತು. ಜನನದ ಸುಮಾರು ಒಂದು ವಾರದ ನಂತರ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಆರೋಗ್ಯ ಕೇಂದ್ರದ ಸಿಬ್ಬಂದಿ ಮಗುವಿಗೆ ಚಿಕಿತ್ಸೆ ನೀಡಿದ್ದರು.

ಈ ಸಮಯದಲ್ಲಿ ಮಗುವನ್ನು ನೋಡಲು ಬಂದಿದ್ದ ಮಗುವಿನ ತಾಯಿಯ ಚಿಕ್ಕಮ್ಮ, ಮಗುವಿಗೆ ಹೊಟ್ಟೆ ಉಬ್ಬರ ಸಮಸ್ಯೆ ಇದೆ ಎಂದು ಕುಟುಂಬಕ್ಕೆ ತಿಳಿಸಿ, ಜಿಲ್ಲೆಯ ಬುಡಕಟ್ಟು ಮೆಲ್ಘಾಟ್ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ‘ದಮ್ಮಾ’ವನ್ನು ಮಾಡಬೇಕೆಂದು ಸೂಚಿಸಿದ್ದರು ಎಂದು ಚಿಕಲ್ದಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ, ಆ ಮಹಿಳೆ ಕಾದ ಕಬ್ಬಿಣದ ಸರಳಿನಿಂದ ಮಗುವಿನ ಹೊಟ್ಟೆ ಮೇಲೆ ಬರೆ ಹಾಕಿದ್ದಾಳೆ.

ಶುಕ್ರವಾರ ಮಗುವಿನ ಆರೋಗ್ಯ ವಿಚಾರಿಸಲು ಮನೆಗೆ ತೆರಳಿದ ಆರೋಗ್ಯ ಕೇಂದ್ರದ ಸಿಬ್ಬಂದಿ ಮಗುವಿಗೆ ಬರೆ ಹಾಕಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಅಚಲ್ಪುರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಬಳಿಕ ಮಗು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.

ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.