ADVERTISEMENT

ಎರ್ನಾಕುಳಂನಲ್ಲಿ ಹಾಡಹಗಲೇ ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆ; ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 12:57 IST
Last Updated 16 ಜೂನ್ 2019, 12:57 IST
ಸೌಮ್ಯಾ
ಸೌಮ್ಯಾ   

ವಳ್ಳಿಕುನ್ನಂ (ಎರ್ನಾಕುಳಂ): ವೇಲಿಕ್ಕರ ವಳ್ಳಿಕುನ್ನಂನಲ್ಲಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಸೌಮ್ಯಾ ಕೊಲೆಗೆ ಹಗೆತನವೇ ಕಾರಣ ಎಂದು ಸೌಮ್ಯಾ ಅವರ ಅಮ್ಮ ಇಂದಿರಾ ಹೇಳಿದ್ದಾರೆ.ಸೌಮ್ಯಾ ಕೊಲೆ ಪ್ರಕರಣದಲ್ಲಿ ಅಜಾಸ್ ಎಂಬಾತ ಆರೋಪಿಯಾಗಿದ್ದಾನೆ.

ಶನಿವಾರ ಕಾಂಜಿಪ್ಪುಳದಲ್ಲಿ ಹಾಡಹಗಲೇ ಸೌಮ್ಯಾಳನ್ನು ಅಜಾಸ್ ಕಿಚ್ಚಿಟ್ಟು ಹತ್ಯೆ ಮಾಡಿದ್ದನು.ಅಜಾಸ್ ಈ ಹಿಂದೆಯೂ ಸೌಮ್ಯಾಳನ್ನು ಕೊಲೆ ಮಾಡಲು ಯತ್ನಿಸಿದ್ದ. ಆಕೆಯ ಗಂಡನನ್ನೂ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಇದೆಲ್ಲವನ್ನೂ ವಳ್ಳಿಕುನ್ನಂ ಎಸ್‌ಐಗೆ ಹೇಳಿದ್ದೆವು ಎಂದು ಇಂದಿರಾ ಹೇಳಿರುವುದಾಗಿ ಮಲಯಾಳಂ ಮನೋರಮ ವರದಿ ಮಾಡಿದೆ.

ಅಜಾಸ್ ಕೈಯಿಂದ ಸೌಮ್ಯಾ ಒಂದೂವರೆ ಲಕ್ಷ ಸಾಲ ಪಡೆದಿದ್ದಳು.ಅದನ್ನು ವಾಪಸ್ ನೀಡಿದರೂ ಅಜಾಸ್ ಅದನ್ನು ಸ್ವೀಕರಿಸಿಲ್ಲ. ಆನಂತರ ಆ ಹಣವನ್ನು ಬ್ಯಾಂಕ್ ಖಾತೆಗೆ ಸೌಮ್ಯಾ ಜಮೆ ಮಾಡಿದ್ದು, ಅಜಾಸ್ ಅದನ್ನು ವಾಪಸ್ ಮಾಡಿದ್ದ.ಇದಾದನಂತರ ಸೌಮ್ಯಾ ಮತ್ತು ಇಂದಿರಾ ಎರಡು ವಾರಗಳ ಹಿಂದೆ ಆಲುವಾಗೆ ಬಂದು ಹಣವನ್ನು ನೇರವಾಗಿ ಕೊಡಲು ಮುಂದಾದರೂ ಅಜಾಸ್ ಅದನ್ನು ಸ್ವೀಕರಿಸಿಲ್ಲ.ಹಣ ಸ್ವೀಕರಿಸುವ ಬದಲು ಆತ ಸೌಮ್ಯಾಳಲ್ಲಿ ವಿವಾಹವಾಗುವಂತೆ ಕೇಳಿಕೊಂಡ. ಅಜಾಸ್ ಎರಡು ಬಾರಿ ಮನೆಗೆ ಬಂದಿದ್ದ.ಮಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುವುದಾಗಿ ಬೆದರಿಕೆಯೊಡ್ಡಿದ್ದ. ಒಂದು ಬಾರಿ ಶೂನಿಂದ ಹೊಡೆದಿದ್ದ ಎಂದು ಇಂದಿರಾ ಹೇಳಿದ್ದಾರೆ.

ADVERTISEMENT

ಮದುವೆಗಾಗಿ ಅಜಾಸ್ ಸೌಮ್ಯಾಳನ್ನು ಒತ್ತಾಯಿಸಿದ್ದು, ಅದಕ್ಕೆ ಒಪ್ಪದೇ ಇದ್ದುದರ ಹಗೆತನವೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಕೊಲ್ಲಂ ಕ್ಲಾಪ್ಪನ ತಂಡಾಶೋರಿಯಪುಷ್ಪಾಕರನ್ - ಇಂದಿರಾ ಅವರ ಹಿರಿಯ ಮಗಳು ಸೌಮ್ಯಾ.ಟೈಲರಿಂಗ್ ಕೆಲಸ ಮಾಡಿ ಇಂದಿರಾ ಮಕ್ಕಳಿಗೆ ಶಿಕ್ಷಣ ನೀಡಿದ್ದರು. ಪುಷ್ಪಾಕರನ್ ಅನಾರೋಗ್ಯದಿಂದ ಹಾಸಿಗೆ ಹಿಡಿದು ವರ್ಷಗಳಾಗಿವೆ.ಪದವಿ ಪರೀಕ್ಷೆ ಪಾಸಾಗಿದ್ದ ಸೌಮ್ಯಾ ಕಠಿಣ ಪರಿಶ್ರಮದಿಂದ ಪೊಲೀಸ್ ನೌಕರಿ ಗಿಟ್ಟಿಸಿಕೊಂಡಿದ್ದರು.

ಸೌಮ್ಯಾ ಅವರ ಮೂರು ಮಕ್ಕಳಲ್ಲಿ ಕಿರಿಯ ಮಗಳು ಕ್ಲಾಪ್ಪನದಲ್ಲಿರುವ ಅಜ್ಜಿ ಮನೆಯಲ್ಲಿದ್ದಾಳೆ.ನಾಲ್ಕು ದಿನಗಳ ಹಿಂದೆಯಷ್ಟೇ ಮಗಳನ್ನು ಭೇಟಿಯಾಗಲು ಸೌಮ್ಯಾ ತವರಿಗೆ ಬಂದಿದ್ದರು. ಇತ್ತೀಚೆಗಷ್ಟೇ ಅವರು ವಳ್ಳಿಕ್ಕುನಂನಲ್ಲಿ ಹೊಸ ಮನೆಗೆ ಶಿಫ್ಟ್ ಆಗಿದ್ದರು.

ಸಂಚು ರೂಪಿಸಿದ್ದ ಅಜಾಸ್
ವಿಶೇಷವಾಗಿ ಸಿದ್ಧಪಡಿಸಿದ ಆಯುಧಗಳನ್ನು ಬಳಸಿ, ಸಂಚು ಹೂಡಿ ಸೌಮ್ಯಾಳನ್ನು ಅಜಾಸ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಜಾಸ್ ಬಳಸಿದ ಮಚ್ಚು ಮತ್ತು ಕತ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವಂತವುಗಳಲ್ಲ.ಸಾಮಾನ್ಯ ಕತ್ತಿಗಿಂತ ಇದು ಉದ್ದವಿದೆ. ಮಚ್ಚು ಕೂಡಾ ತುಂಬಾ ಉದ್ದವಿದ್ದು ಹರಿತವಾಗಿದೆ. ಸೌಮ್ಯಾಳನ್ನು ಕೊಲೆ ಮಾಡಬೇಕು ಎಂಬ ಉದ್ದೇಶದಿಂದಲೇ ಅಜಾಸ್ ಈ ಆಯುಧಗಳನ್ನು ಸಿದ್ಧ ಪಡಿಸಿರಬೇಕು ಎಂದು ಪೊಲೀಸರು ಹೇಳಿದ್ದಾರೆ.

ಅದೇ ವೇಳೆ ಅಜಾಸ್ ಎರ್ನಾಕುಳಂನಿಂದ ಮಚ್ಚು ಖರೀದಿಸಿದ್ದ ಎಂದು ಹೇಳಲಾಗುತ್ತಿದೆ.ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿದ್ದ ಆತ ಕಳೆದ ವಾರ ರಜೆ ಪಡೆದುಕೊಂಡಿದ್ದ. ಹೀಗೆ ಆತ ಸೌಮ್ಯಾಳ ಮೇಲೆ ನಿಗಾ ಇರಿಸಿದ್ದ ಎಂದಿದ್ದಾರೆ ಪೊಲೀಸರು.

ಅಜಾಸ್ ಸೌಮ್ಯಾಳಿಗಿ ಡಿಕ್ಕಿ ಹೊಡೆಸಿದ ಕಾರಿನೊಳಗೆ ಮಚ್ಚು, ಕತ್ತಿ,ಎರಡು ಬಾಟಲಿ ಪೆಟ್ರೋಲ್ ಮತ್ತು ಎರಡು ಸಿಗರೇಟ್ ಲೈಟರ್ ಇತ್ತು. ಸೌಮ್ಯಾಳನ್ನು ಕೊಲೆ ಮಾಡಲೇ ಬೇಕು ಎಂಬ ಉದ್ದೇಶದಿಂದ ಆರೋಪಿ ಇಷ್ಟೊಂದು ವಸ್ತುಗಳನ್ನು ತಂದಿದ್ದನು ಎಂದು ಪೊಲೀಸರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.