ADVERTISEMENT

ಮಧ್ಯ ಪ್ರದೇಶ: ಮಹಿಳಾ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ

ಪಿಟಿಐ
Published 25 ಸೆಪ್ಟೆಂಬರ್ 2021, 10:49 IST
Last Updated 25 ಸೆಪ್ಟೆಂಬರ್ 2021, 10:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್: ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಇತ್ತೀಚೆಗೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ವಿಡಿಯೊ ಚಿತ್ರೀಕರಣ ಮಾಡಿ ಸಂತ್ರಸ್ತೆಯನ್ನು ಬೆದರಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಅತ್ಯಾಚಾರ ಎಸಗಲಾಗಿದ್ದು, ಸೆಪ್ಟೆಂಬರ್ 13ರಂದು ಸಂತ್ರಸ್ತೆಯು ದೂರು ನೀಡಿದ್ದರು. ಬಳಿಕ ತನಿಖೆ ನಡೆಸಲಾಗಿದ್ದು, ಒಬ್ಬ ಆರೋಪಿಯ ತಾಯಿಯೂ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಮತ್ತು ಆತನ ತಾಯಿಯನ್ನು ಬಂಧಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅನುರಾಧಾ ಗಿರ್ವಾಲ್ ತಿಳಿಸಿದ್ದಾರೆ.

‘ಆರೋಪಿಯು ಸಂತ್ರಸ್ತೆಯೊಂದಿಗೆ ಫೇಸ್ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದ ಮತ್ತು ಏಪ್ರಿಲ್‌ನಿಂದ ಆಕೆಯೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂವಹನ ನಡೆಸುತ್ತಿದ್ದ. ಆರೋಪಿಯು ಸಂತ್ರಸ್ತೆಯನ್ನು ತನ್ನ ಸಹೋದರನ ಜನ್ಮದಿನದ ಕೂಟಕ್ಕೆ ಆಹ್ವಾನಿಸಿದ್ದ. ಅಲ್ಲಿಗೆ ತೆರಳಿದ್ದಾಗ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ’ ಎಂದು ಗಿರ್ವಾಲ್ ಹೇಳಿದ್ದಾರೆ.

ಜನ್ಮದಿನ ಕೂಟದ ಸಂದರ್ಭದಲ್ಲಿ ಪ್ರಮುಖ ಆರೋಪಿ, ಆತನ ಸಹೋದರ ಮತ್ತು ಮತ್ತೊಬ್ಬ ವ್ಯಕ್ತಿಯು ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆಯು ದೂರಿನಲ್ಲಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಪ್ರಮುಖ ಆರೋಪಿಯ ತಾಯಿ ಕೂಡ ಬೆದರಿಕೆ ಹಾಕಿದ್ದಾರೆ. ಅವರ ಸಂಬಂಧಿಕರೊಬ್ಬರೂ ಕೊಲೆ ಮಾಡುವುದಾಗಿ ಬೆದರಿಸಿದ್ದಲ್ಲದೆ ಹಣ ದೋಚಲು ಯತ್ನಿಸಿದ್ದರು ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.