ಹತ್ಯೆಯಾದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೆಬಲ್
ಚಿತ್ರಕೃಪೆ: @jsuryareddy
ಹೈದರಾಬಾದ್: ತೆಲಂಗಾಣ ಪೊಲೀಸ್ ಇಲಾಖೆಯ ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ಆಕೆಯ ಸಹೋದರನೇ ಹತ್ಯೆ ಮಾಡಿದ ಪ್ರಕರಣ ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ನಡೆದಿದ್ದು, ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.
ರಾಯ್‌ಪೊಲ್ ನಿವಾಸಿ ಕೊಂಗಾರ ನಾಗಮಣಿ (27) ಹತ್ಯೆಯಾದವರು. ಹಿಂದುಳಿದ ವರ್ಗದ ನಾಗಮಣಿ ಅವರು ಕಳೆದ ತಿಂಗಳು ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಭಂಡಾರಿ ಶ್ರೀಕಾಂತ್ (28) ಅವರನ್ನು ಮದುವೆಯಾಗಿದ್ದರು.
ಹಯಾತ್‌ನಗರದಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದ ನಾಗಮಣಿ, ಇಲ್ಲಿನ ಹಯಾತ್‌ನಗರ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದರು. ಹತ್ತು ವರ್ಷದ ಹಿಂದೆಯೇ ಮೊದಲ ಮದುವೆಯಾಗಿದ್ದ ನಾಗಮಣಿ, ಪತಿ ಜೊತೆಗಿನ ಮನಸ್ತಾಪದ ಬಳಿಕ 2022ರಲ್ಲಿ ವಿಚ್ಛೇದನ ಪಡೆದಿದ್ದರು.
ಭಾನುವಾರ ತಮ್ಮ ಹುಟ್ಟೂರಾದ ರಾಯ್‌ಪೊಲ್‌ಗೆ ತೆರಳಿದ್ದ ಅವರು ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಲು ಹೊರಟಿದ್ದರು. ಮಾರ್ಗಮಧ್ಯದಲ್ಲಿ ಸಹೋದರ ಪರಮೇಶ್ ಬೈಕ್‌ನಿಂದ ಡಿಕ್ಕಿ ಹೊಡೆದು, ಚಾಕುವಿನಿಂದ ತಿವಿದಿದ್ದಾನೆ. ಇದರಿಂದ ನಾಗಮಣಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಪ‍್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
‘ರಾಯ್‌ಪೊಲ್–ಮಣ್ಣೆಗುಡ್ಡ ರಸ್ತೆಯಲ್ಲಿ ಕಾನ್‌ಸ್ಟೆಬಲ್‌ಗೆ ಬೈಕ್‌ನಿಂದ ಗುದ್ದಿ, ಹತ್ಯೆ ಮಾಡಲಾಗಿದೆ. ಅವರ ಸಹೋದರನೇ ಹತ್ಯೆ ಮಾಡಿರುವ ಅನುಮಾನವಿದೆ. ತನಿಖೆ ಮುಂದುವರಿದಿದೆ’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಬಿ. ಸತ್ಯನಾರಾಯಣ ತಿಳಿಸಿದರು.
‘ನಾನು ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದ ವೇಳೆ, ಆಕೆಯ ಸಹೋದರ ಪರಮೇಶ್ ಬೈಕ್‌ನಿಂದ ಬಂದು ಗುದ್ದಿದ್ದು, ಕೊಲ್ಲಲು ಮುಂದಾಗಿದ್ದಾನೆ ಎಂದು ತಿಳಿಸಿದಳು. ಹತ್ತಿರದಲ್ಲಿ ಇರುವವರ ನೆರವು ಪಡೆಯುವಂತೆ ತಿಳಿಸುವಷ್ಟರಲ್ಲಿ ಕರೆ ಕಡಿತಗೊಂಡಿತು. ಘಟನೆ ನಡೆದ ಸ್ಥಳಕ್ಕೆ ತೆರಳಿದ ವೇಳೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು’ ಎಂದು ಶ್ರೀಕಾಂತ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.