ADVERTISEMENT

ಏಕಪಕ್ಷೀಯ ತಲಾಖ್‌ ಅನೂರ್ಜಿತ ಎಂದು ಘೋಷಿಸಿ: ‘ಸುಪ್ರೀಂ’ಗೆ ಮೊರೆ 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 14:48 IST
Last Updated 3 ಅಕ್ಟೋಬರ್ 2022, 14:48 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ತಲಾಖ್‌-ಎ-ಕಿನಾಯಾ’ ಮತ್ತು ‘ತಲಾಖ್-ಎ-ಬೈನ್’ ಸೇರಿದಂತೆ ಎಲ್ಲಾ ರೀತಿಯ ಏಕಪಕ್ಷೀಯ ತಲಾಖ್ ಅನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕಲಬುರಗಿಯ ವೈದ್ಯೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಆಚರಣೆಗಳು ಅನಿಯಂತ್ರಿತ, ಸಮಾನತೆ, ತಾರತಮ್ಯ, ಜೀವನ ಮತ್ತು ಧರ್ಮವನ್ನು ಆಚರಿಸುವ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಡಾ. ಸೈಯೀದಾ ಅಂಬ್ರೀನ್ ಅರ್ಜಿಯಲ್ಲಿ ತಿಳಿಸಿದ್ದು,ಎಲ್ಲಾ ನಾಗರಿಕರಿಗೆ ವಿಚ್ಛೇದನದ ಏಕರೂಪ ವಿಧಾನದ ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ವಕೀಲ ಅನಂತ ನಾರಾಯಣ ಎಂ.ಜಿ. ಮೂಲಕ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ, 2020ರ ಅ.20ರಂದು ಮದುವೆಯಾದ ಬಳಿಕ ತಮ್ಮ ವೈದ್ಯ ಪತಿ ಮತ್ತು ಅವರ ಕುಟುಂಬದಿಂದ ವರದಕ್ಷಿಣೆಗಾಗಿ ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿರುವುದಾಗಿ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ ನಂತರ, ಸುಮಾರು 10 ದಿನ ಆಸ್ಪತ್ರೆಯಲ್ಲಿದ್ದೆ. ಇದಾದ ಬಳಿಕ ಪತಿ ಮನೆಯಿಂದ ಹೊರಗೆ ಹಾಕಿದರು’ ಎಂದು ವಿವರಿಸಿದ್ದಾರೆ.

2022ರ ಜನವರಿಯಲ್ಲಿ ‘ಖಾಜಿ’ ಕಚೇರಿಯಿಂದ ಬಂದ ಪತ್ರದಲ್ಲಿ 8–10 ಆರೋಪಗಳನ್ನು ಮಾಡಲಾಗಿತ್ತು. ‘ಈ ಎಲ್ಲಾ ಪರಿಸ್ಥಿತಿಗಳಿಂದ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಮತ್ತು ವೈವಾಹಿಕ ಸಂಬಂಧದಿಂದ ಮುಕ್ತಗೊಳಿಸಲಾಗಿದೆ ಎಂದು ಪತಿಯ ಪರವಾಗಿ ತಿಳಿಸಲಾಗಿದೆ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.