ADVERTISEMENT

ಪೇಟಿಎಂ ಸಿಇಒ ಖಾಸಗಿ ಮಾಹಿತಿ ಕಳವು; ₹20 ಕೋಟಿ ಬೇಡಿಕೆಯಿಟ್ಟ ಮಹಿಳಾ ಉದ್ಯೋಗಿ!

ಏಜೆನ್ಸೀಸ್
Published 23 ಅಕ್ಟೋಬರ್ 2018, 5:28 IST
Last Updated 23 ಅಕ್ಟೋಬರ್ 2018, 5:28 IST
   

ನೊಯಿಡಾ:ಪೇಟಿಎಂ ಮುಖ್ಯಸ್ಥರ ವೈಯಕ್ತಿಕ ಮಾಹಿತಿ ಕಳವು ಮಾಡಿ ಹಣದ ಬೇಡಿಕೆ ಮುಂದಿಟ್ಟಿದ್ದ ಸಂಸ್ಥೆಯ ಮಹಿಳಾ ಉದ್ಯೋಗಿ ಸೇರಿ ಮೂವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್‌ ಶೇಖರ್‌ ಶರ್ಮಾ ಅವರ ಲ್ಯಾಪ್‌ಟಾಪ್‌ನಿಂದ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ, ಮಾಹಿತಿ ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿ ₹20 ಕೋಟಿ ಬೇಡಿಕೆ ಇರಿಸಿದ್ದ ಇ–ವಾಲೆಟ್‌ ಸಂಸ್ಥೆ ಪೇಟಿಎಂನ ಇಬ್ಬರು ಸಿಬ್ಬಂದಿ ಸೇರಿ ಮೂವರು ಜನರನ್ನು ಬಂಧಿಸಲಾಗಿದೆ.‌

’ಹತ್ತು ವರ್ಷಗಳಿಂದ ವಿಜಯ್‌ ಶೇಖರ್‌ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ತನ್ನ ಪತಿಯೊಂದಿಗೆ ಯೋಜನೆ ರೂಪಿಸಿ, ವಿಜಯ್‌ ಅವರ ಖಾಸಗಿ ಮಾಹಿತಿ ಹಾಗೂ ಹಣಕಾಸು ವಿಚಾರಗಳ ಮಾಹಿತಿಗಳನ್ನು ಕಲೆಹಾಕಿದ್ದಳು. ವಿಜಯ್‌ ಅವರ ಲ್ಯಾಪ್‌ಟಾಪ್‌ ಹಾಗೂ ಇತರೆ ಖಾಸಗಿ ಫೈಲ್‌ಗಳನ್ನು ತೆಗೆದು ನೋಡುವ ಅವಕಾಶವನ್ನು ದುರುಪಯೋಗಿ ಪಡಿಸಿಕೊಂಡ ಆಕೆ ಸಂಸ್ಥೆಯ ಆಡಳಿತ ವಿಭಾಗದ ಹಿರಿಯ ಮ್ಯಾನೇಜರ್‌ ದೇವೇಂದ್ರ ಕುಮಾರ್‌ ಸಹಕಾರ ಪಡೆದಿದ್ದಳು. ಮೂವರೂ ಸೇರಿ ಕೋಲ್ಕತ್ತಾ ನಿವಾಸಿ ರೋಹಿತ್‌ ಕೋಮಲ್‌ನಿಂದ ಬೆದರಿಕೆ ಹಾಕಿಸಿದ್ದರು. ವಿಜಯ್‌ ಅವರ ಖಾಸಗಿ ಮಾಹಿತಿಯನ್ನು ಮಾತ್ರವೇ ಕದಿಯಲಾಗಿದೆ ಹಾಗೂ ಬಳಕೆದಾರರ ದತ್ತಾಂಶಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ಪೇಟಿಎಂ ಹಿರಿಯ ಉಪಾಧ್ಯಕ್ಷ ಅಜಯ್‌ ಶೇಖರ್‌ ಶರ್ಮಾ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್ ವರದಿ ಮಾಡಿದೆ.

ADVERTISEMENT

ಎಲ್ಲ ಖಾಸಗಿ ಮಾಹಿತಿಗಳೂ ತನ್ನಲ್ಲಿದ್ದು, ₹20 ಕೋಟಿ ನೀಡದಿದ್ದರೆ ಎಲ್ಲವನ್ನೂ ಬಹಿರಂಗ ಪಡಿಸುವುದಾಗಿ ಕೋಮಲ್‌ ಸೆಪ್ಟೆಂಬರ್‌ 20ರಂದು ವಿಜಯ್‌ ಮತ್ತು ಅಜಯ್‌ ಇಬ್ಬರಿಗೂ ಕರೆ ಮಾಡಿದ್ದ. ಹೀಗೆ ಅನೇಕ ಬಾರಿ ಕರೆ ಮಾಡುತ್ತಿದ್ದ ಆತ ಹಣ ವರ್ಗಾವಣೆಗೆ ಬ್ಯಾಂಕ್‌ ಖಾತೆಯ ಮಾಹಿತಿ ನೀಡಿದ್ದ. ಅಕ್ಟೋಬರ್‌ 15ರಂದು ಆತನ ಬ್ಯಾಂಕ್‌ ಖಾತೆಗೆ ₹2 ಲಕ್ಷ ವರ್ಗಾಯಿಸಿದ್ದೆವು. ಇನ್ನೂ ₹10 ಕೋಟಿ ವರ್ಗಾಯಿಸಲು ತಯಾರಿರುವಂತೆ ಹೇಳಿದ್ದ. ಯಾವ ರೀತಿಯ ಮಾಹಿತಿ ಇದೆ ಹಾಗೂ ಆ ಮಾಹಿತಿ ಸಿಕ್ಕಿದ್ದು ಹೇಗೆ ಎಂಬುದನ್ನು ತಿಳಿಸುವಂತೆ ಅಜಯ್‌ ಮತ್ತು ವಿಜಯ್‌ ಕೇಳಿಕೊಂಡಿದ್ದರು. ಆ ನಂತರದಲ್ಲಿ ಕೋಮಲ್‌ ಮಹಿಳಾ ಉದ್ಯೋಗಿ ಮತ್ತು ಆಕೆಯೊಂದಿಗೆ ಇನ್ನಿಬ್ಬರು ಸೇರಿ ನಡೆಸಿರುವ ಯೋಜನೆಯನ್ನು ತಿಳಿಸಿದ್ದ. ಇದಾದ ಬಳಿಕ ಸಂಸ್ಥೆಯ ಕಡೆಯಿಂದ ಸೆಕ್ಟರ್‌ 20ರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಅಜಯ್‌ ವಿವರಿಸಿದ್ದಾರೆ.

ಪೊಲೀಸರು ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ ಎಂದು ಪೇಟಿಎಂ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.