ADVERTISEMENT

ವಿಚ್ಛೇದನದ ಬಳಿಕವು ಮಹಿಳೆ ಪರಿಹಾರ ಕೇಳಬಹುದು: ಬಾಂಬೆ ಹೈಕೋರ್ಟ್

ಪಿಟಿಐ
Published 6 ಫೆಬ್ರುವರಿ 2023, 13:52 IST
Last Updated 6 ಫೆಬ್ರುವರಿ 2023, 13:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಿಚ್ಛೇದನದ ನಂತರವು ಮಹಿಳೆಯು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಚ್ಛೇದಿತ ಪತ್ನಿಗೆ ಮಾಸಿಕ ₹ 6000 ಜೀವನಾಂಶ ನೀಡಬೇಕು ಎಂದು ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಎತ್ತಿಹಿಡಿಯಿತು. ಈ ಅರ್ಜಿಯು ವಿಚ್ಛೇದಿತ ಪತ್ನಿಯು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪರಿಹಾರಕ್ಕೆ ಅರ್ಹಳೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

‘ಕೌಟುಂಬಿಕ ಬಾಂಧವ್ಯ’ ಪದವನ್ನು ರಕ್ತಸಂಬಂಧ, ಮದುವೆ ಅಥವಾ ಮದುವೆ ಸ್ವರೂಪದ ಇನ್ನಾವುದೇ ಸಂಬಂಧದ ಮೂಲಕ ಇಬ್ಬರು ಒಟ್ಟಿಗೆ ಇರುವಾಗ ಅಥವಾ ಇದ್ದಾಗಿನ (ಬಹುತೇಕ ಭೂತಕಾಲ) ಸಂಬಂಧ ಎಂದು ಕಾಯ್ದೆಯು ವ್ಯಾಖ್ಯಾನಿಸುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ADVERTISEMENT

ಅರ್ಜಿದಾರನಾದ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡಲು ಬಾಧ್ಯಸ್ಥನಾಗಿರುತ್ತಾರೆ. ಇದರಲ್ಲಿ ವಿಫಲನಾದಲ್ಲಿ ಪ್ರತಿವಾದಿ ಅಥವಾ ಪತ್ನಿಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಅರ್ಜಿ ಸಲ್ಲಿಸದೇ ಅನ್ಯ ಮಾರ್ಗ ಇರುವುದಿಲ್ಲ ಎಂದೂ ಕೋರ್ಟ್‌ ಹೇಳಿದೆ.

‘ಈ ಪ್ರಕರಣದಲ್ಲಿ ಅರ್ಜಿದಾರರು ಅದೃಷ್ಟಶಾಲಿ. ಅವರು ಮಾಸಿಕ ₹ 25,000 ವೇತನ ಪಡೆಯುತ್ತಿದ್ದರೂ ಕೇವಲ ₹ 6000 ಜೀವನಾಂಶ ನೀಡುವಂತೆ ಅದೇಶಿಸಲಾಗಿದೆ’ ಎಂದು ನ್ಯಾಯಮೂರ್ತಿ ಅವಚತ್‌ ಅವರು ಅಭಿಪ್ರಾಯಪಟ್ಟರು.

ಅರ್ಜಿಯ ಪ್ರಕಾರ, ಅರ್ಜಿದಾರ ಮತ್ತು ಮಹಿಳೆ ಮೇ 2013ರಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ವಿವಾದದ ಕಾರಣ ಜುಲೈ 2013ರಲ್ಲಿ ಪ್ರತ್ಯೇಕಗೊಂಡಿದ್ದರು. ನಂತರ ವಿಚ್ಛೇದನ ಪಡೆದಿದ್ದರು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ನಿರ್ವಹಣಾ ಭತ್ಯೆ ಕೋರಿ ಮಹಿಳೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಈ ಅರ್ಜಿ ತಳ್ಳಿಹಾಕಿತ್ತು. ಬಳಿಕ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ, ವೈವಾಹಿಕ ಬಾಂಧವ್ಯ ಊರ್ಜಿತವಾಗಿಲ್ಲದ ಕಾರಣ, ಮಾಜಿ ಪತ್ನಿ ಕೌಟುಂಬಿಕ ಕಾಯ್ದೆಯಡಿ ಪರಿಹಾರ ಪಡೆಯಲು ಅರ್ಹಳಲ್ಲ. ಅಲ್ಲದೆ, ವಿಚ್ಛೇದನ ಸಂದರ್ಭದಲ್ಲಿ ಎಲ್ಲ ಬಾಕಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಮಹಿಳೆ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.