ADVERTISEMENT

ಟಿಆರ್‌ಎಸ್ ಶಾಸಕನ ಸಹೋದರನಿಂದ ಮಹಿಳಾ ಅರಣ್ಯಾಧಿಕಾರಿ ಮೇಲೆ ಹಲ್ಲೆ  

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 20:02 IST
Last Updated 30 ಜೂನ್ 2019, 20:02 IST
   

ಹೈದರಾಬಾದ್:ತೆಲಂಗಾಣದ ಕೋಮರಮ್‌ ಭೀಮ್ ಆಸಿಫಾಬಾದ್‌ ಜಿಲ್ಲೆಯ ಸರ‌ಸಾಲ ಗ್ರಾಮದಲ್ಲಿ ವಲಯ ಅರಣ್ಯಾಧಿಕಾರಿ ಸಿ. ಅನಿತಾ ಅವರಿಗೆ ಆಡಳಿತಾರೂಢ ಟಿಆರ್‌ಎಸ್‌ ಶಾಸಕ ಕೋನೇರು ಕಣ್ಣಪ್ಪ ಅವರ ಸೋದರ ಕೋನೇರು ಕೃಷ್ಣ ಮತ್ತು ಬೆಂಬಲಿಗರು ಥಳಿಸಿದ್ದಾರೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹಲ್ಲೆಗೊಳಗಾದ ಅನಿತಾ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋನೇರು ಕೃಷ್ಣ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಲ್ಲರೆಡ್ಡಿ ಹೇಳಿದ್ದಾರೆ.

ಆಗಿದ್ದೇನು: ಹಸಿರೀಕರಣ ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಡಲು ಕೆಲವು ಸಿಬ್ಬಂದಿ ಜೊತೆ ಅನಿತಾ ಗ್ರಾಮಕ್ಕೆ ತೆರಳಿದ್ದರು. ಆದರೆ ಗಿಡ ನೆಡಲು ಗುರುತಿಸಿದ್ದ ಜಮೀನು ತಮಗೆ ಸೇರಿದ್ದು ಎಂದು ಕೃಷ್ಣ ಆಕ್ಷೇಪ ಎತ್ತಿದರು. ಅಷ್ಟೇ ಅಲ್ಲದೇ ಬಿದಿರುಕೋಲು ಹಿಡಿದು ಬೆಂಬಲಿಗರ ಜೊತೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದರು.

ADVERTISEMENT

ಮಹಿಳೆಯನ್ನು ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಹೊಡೆತದಿಂದ ತಪ್ಪಿಸಿಕೊಳ್ಳಲು ಅನಿತಾ ಅವರು ಟ್ರ್ಯಾಕ್ಟರ್ ಏರುತ್ತಿರುವ ದೃಶ್ಯ ಇದರಲ್ಲಿದೆ. ಗ್ರಾಮಸ್ಥರು ಟ್ರ್ಯಾಕ್ಟರ್‌ ಮೇಲೂ ಕಟ್ಟಿಗೆಯಿಂದ ಹೊಡೆದಿದ್ದಾರೆ.

‘ಕೃಷ್ಣ ಅವರು ಮೊದಲು ಕಟ್ಟಿಗೆಯಿಂದ ಥಳಿಸಿದರು. ಬಳಿಕಅವರ ಬೆಂಬಲಿಗರೂ ದಾಳಿ ಮಾಡಿದರು’ ಎಂದು ಅನಿತಾ ಪ್ರತಿಕ್ರಿಯೆ ನೀಡಿದ್ದಾರೆ.

‘ಒತ್ತುವರಿ ಯತ್ನ’: ದಾಳಿ ವೇಳೆ ಕೃಷ್ಣ ಸ್ಥಳದಲ್ಲಿದ್ದರು ಎಂದು ತೆಲಂಗಾಣದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಝಾ ದೃಢಪಡಿಸಿದ್ದಾರೆ. ‘ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿಗೆ ಈ ಹಿಂದೆಯೂ ಯತ್ನ ನಡೆದಿತ್ತು. ಇಲಾಖೆಯ ಸಿಬ್ಬಂದಿ ಅದನ್ನು ತೆರವುಗೊಳಿಸಿದ್ದರು. ಜಾಗ ನಮ್ಮ ಸುಪರ್ದಿಯಲ್ಲಿದ್ದು, ಉಳುಮೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

***

ಜಮೀನು ಅರಣ್ಯ ಇಲಾಖೆಗೆ ಸೇರಿದ್ದು. ಇದನ್ನು ಶಾಸಕರ ಗಮನಕ್ಕೂ ತರಲಾಗಿತ್ತು. ಹಲ್ಲೆ ಘಟನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ
–ಪಿ.ಕೆ. ಝಾ, ತೆಲಂಗಾಣದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಜನರು ಸೇರಿರುವ ಸಾರ್ವಜನಿಕ ಪ್ರದೇಶದಲ್ಲಿ ಗುಂಡು ಹಾರಿಸುವುದು ಅಪರಾಧ. ಅದನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಬಂಧಿಸಬೇಕು
–ನೀಲಭ್ ಶುಕ್ಲಾ, ಕಾಂಗ್ರೆಸ್ ವಕ್ತಾರ

ಬಹುಶಃ ಇದು ಹಳೆಯ ವಿಡಿಯೊ ಇರಬೇಕು. ಭಾನುವಾರ ಇದನ್ನು ಚಿತ್ರೀಕರಿಸಿಲ್ಲ. ಆದರೂ ಇದನ್ನು ಪರಿಶೀಲಿಸುತ್ತಿದ್ದೇವೆ
–ಸುಬೋಧ್ ಶ್ರೋತಿಯಾ, ಪೊಲೀಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.