ADVERTISEMENT

'ದೃಶ್ಯಂ' ಚಿತ್ರದ ಶೈಲಿಯಲ್ಲಿ ಪತಿಯ ಕೊಂದು ಮನೆಯೊಳಗೆ ಹೂತು ಹಾಕಿದ ಪತ್ನಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2025, 7:39 IST
Last Updated 22 ಜುಲೈ 2025, 7:39 IST
   

ಮುಂಬೈ: ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಂದು ಮನೆಯೊಳಗೆ ಗುಂಡಿ ತೋಡಿ ಹೂತು ಹಾಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಲಸೋಪರದಲ್ಲಿ ನಡೆದಿದೆ.

ವಿಜಯ್‌ ಚವಾಣ್‌(40) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಚಮನ್‌ ಚವಾಣ್‌ ಮತ್ತು ಪ್ರಿಯಕರ ಮೋನು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರ ಹೇಳಿಕೆ ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ 15 ದಿನಗಳಿಂದ ವಿಜಯ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಅವರ ಸಹೋದರ, ಸೋಮವಾರ ಬೆಳಿಗ್ಗೆ ನೇರವಾಗಿ ಮನೆಗೆ ಭೇಟಿ ನೀಡಿದ್ದಾನೆ. ಈ ವೇಳೆ ಅಣ್ಣ ಮನೆಯಲ್ಲಿ ಇರದದ್ದನ್ನು ಕಂಡು ಅತ್ತಿಗೆ ಚಮನ್‌ ಬಳಿ ವಿಚಾರಿಸಿದ್ದಾರೆ. ದೂರದ ಊರಿಗೆ ಕೆಲಸಕ್ಕೆ ಹೋಗಿದ್ದಾರೆ ಎಂದು ಆಕೆ ಉತ್ತರಿಸಿದ್ದಾಳೆ.

ADVERTISEMENT

ಅತ್ತಿಗೆ ಉತ್ತರದಿಂದ ಅನುಮಾನಗೊಂಡ ಸಹೋದರ, ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾನೆ. ಮನೆಯಲ್ಲಿ ಒಂದು ಮೂಲೆಯಲ್ಲಿ ಹೊಸದಾಗಿ ಟೈಲ್ಸ್‌ ಹಾಕಿರುವುದು ಆತನ ಅನುಮಾನಕ್ಕೆ ಪುಷ್ಟಿ ನೀಡಿತ್ತು,

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸಹೋದರ, ಪೊಲೀಸರೊಂದಿಗೆ ಮನೆಗೆ ಬಂದಿದ್ದಾನೆ. ಈ ವೇಳೆಗಾಗಲೇ ಆರೋಪಿ ಚಮನ್‌ ತನ್ನ ಏಳು ವರ್ಷದ ಮಗನನ್ನು ಕರೆದುಕೊಂಡು ಮನೆ ತೊರೆದಿದ್ದಳು. ಆಕೆ ಮನೆ ಬಿಟ್ಟು ಪರಾರಿಯಾಗುತ್ತಿರುವುದು ದೃಶ್ಯ ಸಿಸಿಟಿವಿ ಸೆರೆಯಾಗಿದೆ.

ಮನೆಯ ಬೀಗ ಒಡೆದು ಟೈಲ್ಸ್‌ ಇದ್ದ ಜಾಗವನ್ನು ಅಗೆದ ಪೊಲೀಸರಿಗೆ, ಸುಮಾರು ಆರು ಅಡಿ ಆಳದಲ್ಲಿ ಕಪ್ಪು ಪ್ಲಾಸ್ಟಿಕ್‌ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಸಿಕ್ಕಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ ಹುಡಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.