ADVERTISEMENT

‌ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ನಾಲ್ವರು ಮಹಿಳೆಯರ ಬಂಧನ

ಪಿಟಿಐ
Published 27 ಮಾರ್ಚ್ 2024, 11:39 IST
Last Updated 27 ಮಾರ್ಚ್ 2024, 11:39 IST
.
.   

ಇಂದೋರ್‌: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಗ್ರಾಮವೊಂದರಲ್ಲಿ 30 ವರ್ಷದ ಮಹಿಳೆಯನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಆರೋಪದ ಮೇರೆಗೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಹೋಳಿ ಆಚರಣೆ ವೇಳೆ ಈ ಘಟನೆ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.

ಗೌತಮಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಚೋರಾ ಗ್ರಾಮದಲ್ಲಿ ಸೋಮವಾರ ನಾಲ್ವರು ಮಹಿಳೆಯರು ಸಂತ್ರಸ್ತೆಯನ್ನು ಬಲವಂತವಾಗಿ ಮೆನಯಿಂದ ಹೊರಗೆಳೆದು ಥಳಿಸಿ, ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅವಮಾನಿಸಿದ್ದಾರೆ ಎಂದು ‍ಪೊಲೀಸ್‌ ವರಿಷ್ಠಾಧಿಕಾರಿ (ಗ್ರಾಮೀಣ) ಸುನಿಲ್‌ ಮೆಹ್ತಾ ತಿಳಿಸಿದ್ದಾರೆ.

ADVERTISEMENT

ಅವಮಾನದಿಂದ ವಿಚಲಿತರಾಗಿರುವ ಸಂತ್ರಸ್ತೆ ತನ್ನ ಪೋಷಕರ ಮನೆಗೆ ಹೋಗಿದ್ದಾರೆ. ಸಂತ್ರಸ್ತೆಯು ತನ್ನ ಅತ್ತೆಯನ್ನು ತನ್ನ ವಿರುದ್ಧ ಪ್ರಚೋದಿಸುತ್ತಿದ್ದಾಳೆ ಎಂದು ಒಬ್ಬ ಆರೋಪಿ ಶಂಕೆ ವ್ಯಕ್ತಪಡಿಸಿರುವುದಾಗಿ ಮೆಹ್ತಾ ಹೇಳಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿ ಮಹಿಳೆಯರು ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಚಿತ್ರೀಕರಿಸಿ, ಪ್ರಸಾರ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಗಳು ದೌರ್ಜನ್ಯ ನಡೆಸುವಾಗ ಸಂತ್ರಸ್ತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೂ ಕರುಣೆ ತೋರದ ಆರೋಪಿಗಳು ಸಂತ್ರಸ್ತೆಯ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

ಈ ಸಂಬಂಧ ಐಪಿಸಿ ಕಲಂ 323, 354ಎ, 452 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.