ADVERTISEMENT

ಉನ್ನಾವ್ ಅತ್ಯಾಚಾರ: ಆರೋಪ ಹೊರಿಸಿದ್ದಕ್ಕಾಗಿ ಬೆಲೆ ತೆರಬೇಕಾಯಿತೇ ಸಂತ್ರಸ್ತೆ?

ಏಜೆನ್ಸೀಸ್
Published 29 ಜುಲೈ 2019, 14:49 IST
Last Updated 29 ಜುಲೈ 2019, 14:49 IST
ಕುಲ್‌ದೀಪ್ ಸೆಂಗಾರ್
ಕುಲ್‌ದೀಪ್ ಸೆಂಗಾರ್   

ನವದೆಹಲಿ:ಯೋಗಿ ಆದಿತ್ಯನಾಥ ನೇತೃತ್ವದಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಘಾತಕ್ಕೀಡಾಗಿದ್ದಾಳೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ವಿರುದ್ಧ ಸೋಮವಾರ ಕೇಸು ದಾಖಲಾಗಿದೆ. ಆದಾಗ್ಯೂ, ಬಿಜೆಪಿ ಶಾಸಕ ಸೆಂಗಾರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಕ್ಕಾಗಿಸಂತ್ರಸ್ತೆ ಬೆಲೆ ತೆರಬೇಕಾಯಿತೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.ಈ ಹೋರಾಟದ ಅವಧಿಯಲ್ಲಿ ಈಕೆ ಒಬ್ಬರ ಹಿಂದೆ ಮತ್ತೊಬ್ಬರು ಎಂಬಂತೆತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾಳೆ.

ಭಾನುವಾರ ರಾಯ್‌ಬರೇಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಆಕೆಯ ಚಿಕ್ಕಮ್ಮ ಮತ್ತು ವಕೀಲರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಸಂತ್ರಸ್ತೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಗಮನಿಸಬೇಕಾದ ವಿಷಯ ಎಂದರೆ ಕಾರಿಗೆ ಡಿಕ್ಕಿ ಹೊಡೆದಿರುವ ಟ್ರಕ್ ನಂಬರ್‌ನ್ನು ಮರೆ ಮಾಡಲಾಗಿತ್ತು.ಅಪಘಾತ ಪ್ರಕರಣದಲ್ಲಿ ಟ್ರಕ್ ಚಾಲಕ ಮತ್ತು ಮಾಲೀಕರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಟ್ರಕ್‌‌ನ ಸಾಲ ಪಾವತಿ ಮಾಡದೇ ಇರುವುದರಿಂದ ಟ್ರಕ್ ನಂಬರ್ ಪ್ಲೇಟ್ ಮರೆ ಮಾಡಲಾಗಿದೆ ಎಂದು ಟ್ರಕ್ ಮಾಲೀಕ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.

ADVERTISEMENT

ಇತ್ತ ಇದೆಲ್ಲ ಶಾಸಕ ಸೆಂಗಾರ್‌ನ ಕುತಂತ್ರ. ಕುಲದೀಪ್ ಸೆಂಗಾರ್ ನನ್ನ ಮಗಳನ್ನು ಹತ್ಯೆ ಮಾಡಲು ಜೈಲಿನಲ್ಲಿ ಕುಳಿತು ಸಂಚು ರೂಪಿಸಿದ್ದಾನೆ ಎಂದು ಸಂತ್ರಸ್ತೆಯ ಅಮ್ಮ ಆರೋಪಿಸಿದ್ದಾರೆ.ಆದರೆ ಇದು ಸಂಚು ಅಥವಾ ಹತ್ಯೆಗೆ ಯತ್ನ ಪ್ರಕರಣದಂತೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದು ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಹೇಳಿರುವುದಾಗಿ ಇಂಡಿಯಾ ಟೈಮ್ಸ್ ವರದಿ ಮಾಡಿದೆ.

2018 ಏಪ್ರಿಲ್ 8ರಂದು ಸಂತ್ರಸ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಿವಾಸದ ಮುಂದೆ ಕಿಚ್ಚಿಚ್ಚು ಆತ್ಮಹತ್ಯೆ ಮಾಡಲು ಯತ್ನಿಸಿದ್ದರ ಮರುದಿನವೇ ಪೊಲೀಸ್ ವಶದಲ್ಲಿದ್ದ ಆಕೆಯ ಅಪ್ಪ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು.ಸೆಂಗಾರ್ ಅವರ ಸಹೋದರಸಂತ್ರಸ್ತೆಯ ಅಪ್ಪನಿಗೆ ಥಳಿಸಿದ್ದೇ ಸಾವಿಗೆ ಕಾರಣ ಎಂಬ ಆರೋಪವಿದೆ.

ಕೆಲವು ತಿಂಗಳ ನಂತರ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಯೂನಸ್ ಖಾನ್ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು.

ಇದೆಲ್ಲದರ ಜತೆಗೆ ಡಿಸೆಂಬರ್ 27ರಂದು ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತೆ ಸುಳ್ಳು ಪತ್ರ ಮಾಡಿದ್ದಾರೆ ಎಂದು ಆಕೆಯ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಆ ಪ್ರಕರಣದಲ್ಲಿ ಈಕೆಯ ಅಮ್ಮ ಮತ್ತು ಚಿಕ್ಕಪ್ಪ ಮಹೇಶ್ ವಿರುದ್ಧವೂ ಕೇಸು ದಾಖಲಾಗಿದೆ.ಭಾನುವಾರ ಜೈಲಿನಲ್ಲಿರುವ ಮಹೇಶ್‌ನ್ನು ಭೇಟಿ ಮಾಡಲು ಸಂತ್ರಸ್ತೆ ಸಂಬಂಧಿಕರೊಂದಿಗೆ ಕಾರಿನಲ್ಲಿ ತೆರಳಿದ್ದರು.

ಕುಲದೀಪ್ ಸೆಂಗಾರ್‌ನ್ನು ಸಿಬಿಐ ಬಂಧಿಸಿದ್ದು, ಸದ್ಯ ಜೈಲಿನಲ್ಲಿದ್ದಾರೆ. ಹೀಗಿದ್ದರೂ ಇವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿಲ್ಲ.ಕೆಲವು ತಿಂಗಳುಗಳ ಹಿಂದೆ ಸಂಸದ ಸಾಕ್ಷಿ ಮಹಾರಾಜ್, ಸೆಂಗಾರ್‌ನ್ನು ಜೈಲಿನಲ್ಲಿ ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸಿದ್ದರು.

ಜೂನ್ 2017ರಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಕೆಲಸದ ವಿಷಯಕ್ಕಾಗಿ ಸೆಂಗಾರ್‌ನ್ನು ಭೇಟಿ ಮಾಡಿದ್ದರು.ಅಲ್ಲಿ ಸೆಂಗಾರ್ ತನ್ನನ್ನುಅಪಹರಿಸಿ ಮನೆಯೊಳಗೆ ಅತ್ಯಾಚಾರವೆಸಗಿದ್ದರು ಎಂದು ಬಾಲಕಿ ದೂರು ನೀಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.