ADVERTISEMENT

ಸಚಿವ ಮುಂಡೆ ವಿರುದ್ಧದ ಅತ್ಯಾಚಾರ ದೂರು ವಾಪಸ್ ಪಡೆದ ಮಹಿಳೆ

ಪಿಟಿಐ
Published 22 ಜನವರಿ 2021, 5:35 IST
Last Updated 22 ಜನವರಿ 2021, 5:35 IST
ಸಚಿವ ಧನಂಜಯ್ ಮುಂಡೆ
ಸಚಿವ ಧನಂಜಯ್ ಮುಂಡೆ   

ಮುಂಬೈ: ಸಚಿವ ಧನಂಜಯ್ ಮುಂಡೆ ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿ, ಪೊಲೀಸರಿಗೆ ದೂರು ನೀಡಿದ್ದ ಮುಂಬೈ ಮೂಲದ ಮಹಿಳೆ, ತಾನು ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

‘ಮುಂಡೆ ವಿರುದ್ಧ ನೀಡಿದ್ದ ದೂರನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದೇನೆ‘ ಎಂದು ಮಹಿಳೆ, ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಅಧಿಕಾರಿಗೆ ತಿಳಿಸಿದ್ದಾರೆ. ಆದರೆ ದೂರು ಹಿಂಪಡೆದಿರುವುದಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದೂರು ಹಿಂಪಡೆದಿರುವ ಸಂಬಂಧ ನೋಟರಿ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸುವಂತೆ ಪೊಲೀಸರು ದೂರುದಾರರಿಗೆ ಸೂಚಿಸಿದ್ದಾರೆ.

2006 ರಲ್ಲಿ ಮದುವೆಯ ನೆಪದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ಮಹಿಳೆಯೊಬ್ಬರು ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ವಿರುದ್ಧ ಜನವರಿ 11 ರಂದು ದೂರು ನೀಡಿದ್ದರು. ‌ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಗ, ದೂರದಾರ ಮಹಿಳೆ, ತನ್ನ ಹೇಳಿಕೆಯನ್ನು ದಾಖಲಿಸಲು ಓಶಿಪುರ ಪೊಲೀಸ್ ಠಾಣೆಗೆ ತೆರೆಳಿದ್ದರು.

ಬೀಢ್‌ ಜಿಲ್ಲೆ ಎನ್‌ಸಿಪಿ ಪಕ್ಷದ ಹಿರಿಯ ನಾಯಕ ಮುಂಡೆ, ಮಹಿಳೆ ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದರು. ಆಕೆ ಬ್ಲಾಕ್‌ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೇ ವೇಳೆ ದೂರು ನೀಡಿರುವ ಮಹಿಳೆಯ ಸಹೋದರಿಯೊಂದಿಗೆ ಸಂಬಂಧ ಹೊಂದಿರುವುದನ್ನು ಸಚಿವರು ಒಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.