ನವದೆಹಲಿ: ದೇಶದಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ಕಳೆದ ಐದು ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ವಾರ್ಷಿಕ ಸಂಯುಕ್ತ ಶೇಕಡ 22ರಷ್ಟು (ಸಿಎಜಿಆರ್) ದರದಲ್ಲಿ ಬೆಳೆದಿದೆ.
ಹೀಗೆ ಸಾಲ ಪಡೆದವರಲ್ಲಿ ಗ್ರಾಮೀಣ ಪ್ರದೇಶದವರು ಹಾಗೂ ಅರೆ–ನಗರ ಪ್ರದೇಶಗಳಿಗೆ ಸೇರಿದವರು ಹೆಚ್ಚಿದ್ದಾರೆ. ಇವರು ತಮ್ಮ ಕ್ರೆಡಿಟ್ ಅಂಕಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತಾರೆ. ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಈ ವಿವರಗಳು ಇವೆ.
ಮಹಿಳೆಯರು ವಿವಿಧ ಖರೀದಿಗಳಿಗಾಗಿ ಸಾಲ ಪಡೆದಿರುವುದು ಹೆಚ್ಚಿದೆ, ವಾಣಿಜ್ಯೋದ್ಯಮದ ಉದ್ದೇಶಕ್ಕೆ ಸಾಲ ಪಡೆದಿರುವುದು ಕಡಿಮೆ ಇದೆ. ಟ್ರಾನ್ಸ್‌ಯೂನಿಯನ್ ಸಿಬಿಲ್, ನೀತಿ ಆಯೋಗದ ಮಹಿಳಾ ಉದ್ಯಮಿಗಳ ವೇದಿಕೆ (ಡಬ್ಲ್ಯುಇಪಿ) ಮತ್ತು ಮೈಕ್ರೊಸೇವ್ ಕನ್ಸಲ್ಟಿಂಗ್ (ಎಂಎಸ್‌ಸಿ) ಈ ವರದಿಯನ್ನು ಸಿದ್ಧಪಡಿಸಿವೆ.
2024ರಲ್ಲಿ ಮಹಿಳೆಯರು ಪಡೆದ ಒಟ್ಟು ಸಾಲದಲ್ಲಿ ವಾಣಿಜ್ಯೋದ್ಯಮ ಉದ್ದೇಶಕ್ಕೆ ಪಡೆದಿದ್ದರ ಪ್ರಮಾಣ ಶೇ 3ರಷ್ಟು ಮಾತ್ರವೇ ಇದೆ. ವೈಯಕ್ತಿಕ ಸಾಲ, ಗೃಹಬಳಕೆ ವಸ್ತುಗಳಿಗಾಗಿ ಸಾಲ, ಮನೆ ಖರೀದಿಗೆ ಪಡೆದ ಸಾಲದ ಒಟ್ಟು ಪ್ರಮಾಣ ಶೇ 42ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.