ADVERTISEMENT

ಪತ್ರಕರ್ತೆಯರು ರಾಜಕೀಯ ಪಕ್ಷದ ಏಜೆಂಟರು: ತ್ರಿಪುರಾದ ಸಚಿವ ಸುಶಾಂತ್ ಚೌಧರಿ ಆರೋಪ

ಪಿಟಿಐ
Published 16 ನವೆಂಬರ್ 2021, 10:02 IST
Last Updated 16 ನವೆಂಬರ್ 2021, 10:02 IST
.
.   

ಅಗರ್ತಲಾ: ಇತ್ತೀಚೆಗೆ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ತ್ರಿಪುರದ ಇಬ್ಬರು ಪತ್ರಕರ್ತೆಯರು ರಾಜಕೀಯ ಪಕ್ಷದ ಏಜೆಂಟರು ಎಂದು ತ್ರಿಪುರಾ ಮಾಹಿತಿ ಮತ್ತು ಸಂಸ್ಕೃತಿ ಸಚಿವ (ಐಸಿಎ) ಸುಶಾಂತ್ ಚೌಧರಿ ಆರೋಪಿಸಿದ್ದಾರೆ.

ಇಲ್ಲಿನ ಸಿವಿಲ್ ಸೆಕ್ರಟರಿಯೇಟ್‌ನಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಈ ಇಬ್ಬರು ವರದಿಗಾರರು ರಾಜ್ಯ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಬಯಸುತ್ತಿದ್ದಾರೆ’ ಎಂದು ದೂರಿದರು.

’ಪತ್ರಕರ್ತೆಯರೆಂದು ಗುರುತಿಸಿಕೊಂಡಿದ್ದ ಈ ಇಬ್ಬರು ವಾಸ್ತವವಾಗಿ ರಾಜಕೀಯ ಪಕ್ಷದ ಏಜೆಂಟರಂತೆ ಇಲ್ಲಿಗೆ ಬಂದು ರಾಜ್ಯದಲ್ಲಿ ಕೋಮು ಗಲಭೆಯಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಒಂದು ವರ್ಗದ ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಪತ್ರಕರ್ತರು ಎಂಬ ಬಗ್ಗೆ ನನಗೆ ಅನುಮಾನವಿದೆ’ ಎಂದು ಚೌಧರಿ ಹೇಳಿದರು.

ADVERTISEMENT

’ಗೋಮತಿ ಜಿಲ್ಲೆಯ ಕಕರಬಾನ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಪತ್ರಕರ್ತೆಯರನ್ನುಅಗರ್ತಲಾ ಪೊಲೀಸ್ ಠಾಣೆಯಲ್ಲಿಪ್ರಶ್ನಿಸಲಾಗಿತ್ತು. ಆದರೆ ಅವರು ಸುಳ್ಳು ಹೇಳಿ, ಠಾಣೆಗೆ ಯಾವುದೇ ಮಾಹಿತಿ ನೀಡದೇ ಅಸ್ಸಾಂಗೆ ಹೋದರು’ ಎಂದು ಸಚಿವರು ದೂರಿದ್ದಾರೆ.

’ಈ ಪತ್ರಕರ್ತೆಯರು ಘಟನಾ ಸ್ಥಳಕ್ಕೆ ತಲುಪುವ ಮೊದಲೇ, ತ್ರಿಪುರಾದ ‌ಹೊರವಲಯದಲ್ಲಿದ್ದಾಗಲೇ ಮಸೀದಿಗೆ ಬೆಂಕಿ ಬಿದ್ದಿದೆ ಎಂದು ಬಿಂಬಿಸುವ ನಕಲಿ ದೃಶ್ಯದ ತುಣುಕುಗಳು ಮತ್ತು ಫೋಟೊಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಜನರಿಗೆ ತಾವು ತ್ರಿಪುರಾದಲ್ಲೇ ಇದ್ದೇವೆ ಎಂಬ ನಂಬಿಕೆ ಬರಲಿ ಎಂದು ಹೀಗೆ ಮಾಡಿದ್ದರು’ ಎಂದು ಸಚಿವರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿನ ಈ ಪೋಸ್ಟ್‌ನಿಂದಾಗಿ, ತ್ರಿಪುರಾದಲ್ಲಿ ಆ ಘಟನೆ ನಡೆಯದಿದ್ದರೂ, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿನ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದರು. ಹೊರಗಿನ ಅನೇಕ ಪತ್ರಕರ್ತರು ರಾಜ್ಯದಲ್ಲಿ ನಡೆಯದಿದ್ದನ್ನು ಬರೆದಿದ್ದಾರೆ’ ಎಂದು ಸಚಿವ ಚೌಧರಿ ದೂರಿದ್ದಾರೆ.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ರಾಜಕೀಯ ಪಕ್ಷಗಳು ಈ ರೀತಿ ಸಂಚು ರೂಪಿಸಿವೆ. ರಾಜಕಾರಣಿಗಳು, ಪಶ್ಚಿಮ ಬಂಗಾಳದಿಂದ ಜನರನ್ನು ಕರೆತರುವ ಮೂಲಕ ಗೂಂಡಾಗಿರಿ ಮತ್ತು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದುಯಾವುದೇ ರಾಜಕೀಯ ಪಕ್ಷದ ಹೆಸರು ಪ್ರಸ್ತಾಪಿಸದೇ ಚೌಧರಿ ಆರೋಪಿಸಿದ್ದಾರೆ.

ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ಕೋಮು ಸಂಘರ್ಷದ ಕುರಿತು ವರದಿ ಮಾಡಲು ಬಂದಿದ್ದಎಚ್‌ಡಬ್ಲ್ಯು ನ್ಯೂಸ್ ನೆಟ್‌ವರ್ಕ್‌ನ ಪತ್ರಕರ್ತೆ ಯರಾದ ಸಮೃದ್ಧಿ ಸುಕುನಿಯಾ ಮತ್ತು ಸ್ವರ್ಣಾ ಝಾ ಅವರನ್ನು ಅಸ್ಸಾಂ–ತ್ರಿಪುರಾ ಗಡಿಯಲ್ಲಿರುವ ಕರೀಂಗಂಜ್‌ನ ನೀಲಂಬಜಾರ್‌ನಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ತ್ರಿಪುರಾಕ್ಕೆ ಕರೆತರಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹಂಚಿದ ಆರೋಪದ ಮೇಲೆ ಸೋಮವಾರ ಅವರನ್ನು ಬಂಧಿಸಲಾಗಿತ್ತು.ಸೋಮವಾರವೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.