ADVERTISEMENT

ತಮಿಳುನಾಡು ದೇವಾಲಯಗಳಲ್ಲಿ ಮಹಿಳಾ ಅರ್ಚಕರಿಂದ ಪೂಜೆ: ಸಿಎಂ ಸ್ಟಾಲಿನ್

ಪಿಟಿಐ
Published 14 ಸೆಪ್ಟೆಂಬರ್ 2023, 11:50 IST
Last Updated 14 ಸೆಪ್ಟೆಂಬರ್ 2023, 11:50 IST
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್    

ಚೆನ್ನೈ: ‘ತಮಿಳುನಾಡಿನ ದ್ರಾವಿಡ ಶೈಲಿ ಸರ್ಕಾರದಿಂದ ರಾಜ್ಯದ ದೇವಾಲಯಗಳಲ್ಲಿ ಅರ್ಚಕರಾಗಿ ಮಹಿಳೆಯರು ಪ್ರವೇಶಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಎಕ್ಸ್‌ (ಟ್ವಿಟರ್‌) ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರ, ‘ಮಹಿಳೆಯರು ಪೈಲೆಟ್‌ಗಳಾಗಿ, ಗಗನಯಾತ್ರಿಗಳಾಗಿ ಸಾಧನೆ ಮೆರೆದಿದ್ದಾರೆ. ಹೀಗಿದ್ದರೂ ದೇವಾಲಯದ ಪೂಜೆಯಿಂದ ಅವರಿಗೆ ಈಗಲೂ ಹೊರಗಿಡಲಾಗಿದೆ. ಶುದ್ಧ, ಅಶುದ್ಧಗಳ ಹೆಸರಿನಲ್ಲಿ ಈಗಲೂ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧವಿದೆ. ಆದರೆ ತಮಿಳುನಾಡಿನ ದ್ರಾವಿಡ ಮಾದರಿಯ ಸರ್ಕಾರದಲ್ಲಿ ಬದಲಾವಣೆ ಶಾಶ್ವತ’ ಎಂದಿದ್ದಾರೆ.

‘ಸಾಮಾಜಿಕ ಕ್ರಾಂತಿಯ ಹರಿಕಾರ ಪೆರಿಯಾರ್ ಅವರ ಆಶಯದಂತೆ ಎಲ್ಲಾ ಜಾತಿಗೆ ಸೇರಿದವರನ್ನೂ ಅರ್ಚಕರನ್ನಾಗಿ ಮಾಡುವುದರ ಜತೆಗೆ ಮಹಿಳೆಯರಿಗೂ ಅರ್ಚಕ ವೃತ್ತಿಯಲ್ಲಿ ಸ್ಥಾನ ನೀಡಲಾಗಿದೆ. ಇದಕ್ಕಾಗಿ ಎಲ್ಲಾ ಜನಾಂಗದ ಆಸಕ್ತರಿಗೆ ಅರ್ಚಕ ವೃತ್ತಿಯ ಸೂಕ್ತ ತರಬೇತಿ ನೀಡಲಾಗುವುದು. ಆ ಮೂಲಕ ಮಹಿಳೆಯರೂ ಗರ್ಭಗುಡಿ ಪ್ರವೇಶಿಸಲಿದ್ದಾರೆ. ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ  ರಾಜ್ಯದಲ್ಲಿ ಹೊಸ ಶೆಖೆ ಆರಂಭವಾಗಲಿದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.

ADVERTISEMENT

ರಾಜ್ಯ ಸರ್ಕಾರದ ಈ ಕಾರ್ಯಕ್ರಮದ ಅಡಿಯಲ್ಲಿ ಮೂವರು ಮಹಿಳೆಯರು ತಿರುಚನಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀರಂಗನಾಥರ್‌ ದೇವಾಲಯದಲ್ಲಿ ಅರ್ಚಕ ವೃತ್ತಿಯ ತರಬೇತಿ ಪಡೆದಿದ್ದಾರೆ. ರಾಜ್ಯದ ಕೆಲ ದೇವಾಲಯಗಳಲ್ಲಿ ಈಗಾಗಲೇ ಕೆಲ ಮಹಿಳೆಯರು ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.