ADVERTISEMENT

ಭವಿಷ್ಯದಲ್ಲಿಯೂ ತ್ರಿಭಾಷಾ ನೀತಿಯನ್ನು ಸ್ವೀಕರಿಸುವುದಿಲ್ಲ: ಸಂಜಯ್ ರಾವುತ್

ಪಿಟಿಐ
Published 2 ಜುಲೈ 2025, 7:21 IST
Last Updated 2 ಜುಲೈ 2025, 7:21 IST
ಸಂಜಯ್ ರಾವುತ್ 
ಸಂಜಯ್ ರಾವುತ್    

ಮುಂಬೈ: ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಆದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಳ್ಳಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ನಾವು ಭವಿಷ್ಯದಲ್ಲಿ ಎಂದಿಗೂ ಅಂತಹ ನೀತಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಪರಿಚಯಿಸುವುದಕ್ಕೆ ಸಂಬಂಧಿಸಿದಂತೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆ, ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಸರ್ಕಾರಿ ಆದೇಶಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.

ಭಾಷಾ ನೀತಿಯ ಕುರಿತು ಮುಂದಿನ ಮಾರ್ಗ ಸೂಚಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಂತರ ಘೋಷಿಸಿದ್ದರು.

ADVERTISEMENT

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ‘ಫಡಣವೀಸ್ ಸಮಿತಿಗಳು ಮತ್ತು ಎಸ್‌ಐಟಿಗಳನ್ನು ರಚಿಸಲು ಇಷ್ಟಪಡುತ್ತಾರೆ. ಆದರೆ, ಏನನ್ನೂ ಜಾರಿ ಮಾಡುವುದಿಲ್ಲ’ಎಂದರು.

ಜಾಧವ್ ಅವರನ್ನು ಅರ್ಥಶಾಸ್ತ್ರಜ್ಞರಾಗಿ ಗೌರವಿಸಲಾಗುತ್ತದೆ. ಆದರೆ, ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗೆ ಈಗ ಯಾವುದೇ ಪ್ರಸ್ತುತತೆ ಇಲ್ಲ. ಭವಿಷ್ಯದಲ್ಲಿ ತ್ರಿಭಾಷಾ ನೀತಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ರಾವುತ್ ಪ್ರತಿಪಾದಿಸಿದ್ದಾರೆ.

ಶಿವಸೇನಾ (ಯುಬಿಟಿ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜಂಟಿಯಾಗಿ ಜುಲೈ 5 ರಂದು ಮುಂಬೈನಲ್ಲಿ ಆಯೋಜಿಸಲಿರುವ 'ಮರಾಠಿ ವಿಜಯ್ ದಿವಸ್' ಆಚರಣೆಯ ಕುರಿತು ಮಾತನಾಡಿದ ಅವರು, ಎರಡೂ ಕಡೆಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ನಾವು ಪ್ರಮುಖ ನಾಯಕರು ಮತ್ತು ಸಾರ್ವಜನಿಕರನ್ನು ಆಹ್ವಾನಿಸಿದ್ದೇವೆ. ನಾವು ಕೇವಲ ಸಂಘಟಕರು. ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ನಮ್ಮ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.