ADVERTISEMENT

ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಪಿಟಿಐ
Published 18 ಅಕ್ಟೋಬರ್ 2025, 16:14 IST
Last Updated 18 ಅಕ್ಟೋಬರ್ 2025, 16:14 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಪಿಟಿಐ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕ ಒಮರ್‌ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಕೆಲವು ಪಕ್ಷಗಳು ಈ ಹಿಂದೆ ಮಾಡಿರುವ ತಪ್ಪನ್ನು ಪುನಾರವರ್ತಿಸಲು ತಮ್ಮ ಪಕ್ಷ ಬಯಸುವುದಿಲ್ಲ ಎಂದಿರುವ ಅವರು, ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವಂತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಕುರಿತು ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಸಲ್ಲಿಕೆಯಾಗಿರುವ ಹಲವು ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಅಕ್ಟೋಬರ್‌ 10ರಂದು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ರಾಜ್ಯ ಸ್ಥಾನಮಾನ ಪುನಸ್ಥಾಪನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೇರುವುದನ್ನು ಅವಲಂಭಿಸಿದೆ ಎನ್ನುವುದಾದರೆ, ಕೇಸರಿ ಪಕ್ಷವು ಆ ವಿಚಾರದಲ್ಲಿ ಪ್ರಾಮಾಣಿಕವಾಗಿರಬೇಕು. ಏಕೆಂದರೆ, ಬಿಜೆಪಿಯು ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಾಗಲಿ, ಸಂಸತ್‌ ಚುನಾವಣೆ ಸಂದರ್ಭದಲ್ಲಾಗಲಿ ಅಥವಾ ಸುಪ್ರೀಂ ಕೋರ್ಟ್‌ಗಾಗಲಿ ಆ ರೀತಿ ಹೇಳಿಲ್ಲ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಅದೇರೀತಿ, ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುವುದಿಲ್ಲ ಎನ್ನುವುದಾದರೆ, ಅದನ್ನು ನಮಗೆ ತಿಳಿಸಲಿ. ಆಗ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ಮುಂದುವರಿದು, ಬಿಜೆಪಿ ಜೊತೆ ಕೈ ಜೋಡಿಸುವುದು ಅಥವಾ ಮೈತ್ರಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ–ಬಿಜೆಪಿ 2015ರಲ್ಲಿ ಮಾಡಿಕೊಂಡಿದ್ದ ಮೈತ್ರಿಯ ಪರಿಣಾಮಗಳನ್ನು ಈಗಲೂ ಅನುಭವಿಸುತ್ತಿದ್ದೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.