ADVERTISEMENT

ಅಯೋಧ್ಯೆ | ಮಸೀದಿ ಉದ್ಘಾಟನೆ ಸಮಾರಂಭಕ್ಕೆ ತೆರಳುವುದಿಲ್ಲ: ಯೋಗಿ ಆದಿತ್ಯನಾಥ

ಉತ್ತರ ಪ್ರದೇಶ ಸಿ.ಎಂ ಕ್ಷಮೆಯಾಚಿಸಬೇಕು: ಸಮಾಜವಾದಿ ಪಕ್ಷ ಆಗ್ರಹ

ಪಿಟಿಐ
Published 7 ಆಗಸ್ಟ್ 2020, 11:50 IST
Last Updated 7 ಆಗಸ್ಟ್ 2020, 11:50 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ‌ ನೀಡಿರುವ ಹೇಳಿಕೆಗೆ ಸಮಾಜವಾದಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಯೋಗಿ ಆದಿತ್ಯನಾಥ‌ ಅವರು ಕ್ಷಮೆಯಾಚಿಸಬೇಕು ಎಂದು ಅದು ಒತ್ತಾಯಿಸಿದೆ.

‘ಯೋಗಿ ಆದಿತ್ಯನಾಥ‌ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ಕೇವಲ ಹಿಂದೂ ಸಮುದಾಯಕ್ಕೆ ಮಾತ್ರವಲ್ಲ. ಮುಖ್ಯಮಂತ್ರಿ ಅವರ ಈ ಹೇಳಿಕೆ ಹುದ್ದೆಯ ಘನತೆಗೆ ಧಕ್ಕೆ ತರುತ್ತದೆ’ ಎಂದು ಸಮಾಜವಾದಿ ಪಕ್ಷದ ವಕ್ತಾರ ಪವನ್‌ ಪಾಂಡೆ ಶುಕ್ರವಾರ ಟೀಕಿಸಿದ್ದಾರೆ.

ADVERTISEMENT

‘ಒಬ್ಬ ಯೋಗಿಯಾಗಿ ಮತ್ತು ಹಿಂದೂವಾಗಿ ಮಸೀದಿ ಉದ್ಘಾಟನೆಗೆ ತೆರಳುವುದಿಲ್ಲ’ ಎಂದು ಯೋಗಿ ಆದಿತ್ಯನಾಥ‌ ಅವರು ಗುರುವಾರ ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದರು.

‘ಒಬ್ಬ ಮುಖ್ಯಮಂತ್ರಿಯಾಗಿ ಯಾವುದೇ ಧರ್ಮ ಅಥವಾ ಸಮುದಾಯದ ನಂಬಿಕೆಯ ಬಗ್ಗೆ ನನಗೆ ಸಮಸ್ಯೆ ಇಲ್ಲ. ಆದರೆ, ಒಬ್ಬ ಯೋಗಿಯಾಗಿ ನೀವು ನನ್ನನ್ನು ಪ್ರಶ್ನಿಸಿದರೆ, ಖಚಿತವಾಗಿ ನಾನು ಹೋಗುವುದಿಲ್ಲ. ಒಬ್ಬ ಹಿಂದೂವಾಗಿ ನನ್ನ ಉಪಾಸನಾ ವಿಧಿಯನ್ನು ವ್ಯಕ್ತಪಡಿಸುವ ಹಕ್ಕು ನನಗಿದೆ. ಈ ಹಿನ್ನೆಲೆಯಲ್ಲೇ ನಾನು ನಡೆದುಕೊಳ್ಳುತ್ತೇನೆ’ ಎಂದು ಯೋಗಿ ಆದಿತ್ಯನಾಥ‌ ಹೇಳಿದ್ದರು.

‘ನಾನು ವಾದಿಯೂ ಅಲ್ಲ, ಪ್ರತಿವಾದಿಯೂ ಅಲ್ಲ. ಹೀಗಾಗಿ, ನನ್ನನ್ನು ಆಹ್ವಾನಿಸುವುದಿಲ್ಲ. ನಾನು ಹೋಗುವುದಿಲ್ಲ. ಜತೆಗೆ, ಅಂತಹ ಆಹ್ವಾನವೂ ನನಗೆ ಬರುವುದಿಲ್ಲ ಎನ್ನುವುದು ನನಗೆ ಗೊತ್ತಿದೆ’ ಎಂದು ಹೇಳಿದ್ದರು.

‘ನನ್ನನ್ನು ಅವರು ಆಹ್ವಾನಿಸಿದ ದಿನ ಹಲವರ ಜಾತ್ಯತೀತತೆ ಅಪಾಯದಲ್ಲಿ ಸಿಲುಕುತ್ತದೆ. ಅವರ ಜಾತ್ಯತೀತತೆ ಅಪಾಯದಲ್ಲಿ ಸಿಲುಕುವುದು ಬೇಡ. ಮೌನವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಯಾವುದೇ ರೀತಿಯ ತಾರತಮ್ಯವಿಲ್ಲದೆ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೆ ತಲುಪುವಂತೆ ನೋಡಿಕೊಳ್ಳುತ್ತೇನೆ’ ಎಂದು ಸಂದರ್ಶನದಲ್ಲಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಲು ಉತ್ತರ ಪ್ರದೇಶದ ಕಾಂಗ್ರೆಸ್‌ ವಕ್ತಾರರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.